ಬೆಂಗಳೂರು : ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸಂಪತ್ ರಾಜ್ನ ಸಿಸಿಬಿ ಪೊಲೀಸರು ನಾಲ್ಕು ದಿನಗಳ ಹಿಂದೆ ಬಂಧಿಸಿದ್ದರು. ಮೂರು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಇಂದು ಮಧ್ಯಾಹ್ನ ನಗರದ 67ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಿದರು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಕಾತ್ಯಾಯಿನಿ ಅವರು ಆರೋಪಿ ಸಂಪತ್ ರಾಜ್ನ ನವೆಂಬರ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ವೇಳೆ ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿಸಿದ ಆರೋಪ ಸಂಪತ್ ರಾಜ್ ವಿರುದ್ಧ ಕೇಳಿ ಬಂದಿತ್ತು.
ಈ ಹಿನ್ನೆಲೆ ಸಿಸಿಬಿ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದರು. ಇದೇ ವೇಳೆ ತನಗೆ ಅನಾರೋಗ್ಯ ಎಂದು ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಬಳಿಕ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಬಳಿಕ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದ್ರೆ, ಕೋರ್ಟ್ ಆ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯೂ ಪುರಸ್ಕೃತಗೊಂಡಿರಲಿಲ್ಲ. ಹೀಗಾಗಿ ಪೊಲೀಸರು ಬಂಧಿಸುವ ಭೀತಿಗೆ ಒಳಗಾಗಿದ್ದ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದರು.