ಬೆಂಗಳೂರು: ತಂತ್ರಜ್ಞಾನದ ಮನೆಯಾಗಿ ಬೆಂಗಳೂರು ಜನಪ್ರಿಯವಾಗಿದೆ. ಆವಿಷ್ಕಾರದಲ್ಲಿ ಮಹಾನಗರ ಸದಾ ಮುಂಚೂಣಿಯಲ್ಲಿದೆ. ಭಾರತ ದಿನದಿಂದ ದಿನಕ್ಕೆ ಆವಿಷ್ಕಾರ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸುತ್ತಿದ್ದು, ದೇಶ ಪ್ರಗತಿಯತ್ತ ಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಂತ್ರಜ್ಞಾನ ಪ್ರಗತಿಯಲ್ಲಿ ಸಾಧನೆ ಅಪಾರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಟೆಕ್ ಸಮಿಟ್ನಲ್ಲಿ ವರ್ಚುಯಲ್ ಮೂಲಕ ಮಾತನಾಡಿದ ಅವರು, ಭಾರತ ಪ್ರಗತಿಯ ಪಥದಲ್ಲಿದೆ. ಸ್ಟಾರ್ಟ್ ಅಪ್ ರಾಜಧಾನಿ ಎನಿಸಿದೆ. ತಂತ್ರಜ್ಞಾನ ಪ್ರಗತಿಯಲ್ಲಿ ನಮ್ಮ ಸಾಧನೆ ಅಪಾರ. ಕಳೆದ 8 ವರ್ಷದಲ್ಲಿ ನಾವು ದೊಡ್ಡ ಮಟ್ಟದಲ್ಲಿ ತಾಂತ್ರಿಕ ಪ್ರಗತಿ ಸಾಧಿಸಿದ್ದೇವೆ. ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಗತಿ ದೊಡ್ಡ ಮಟ್ಟದ್ದಾಗಿದೆ.
ಕಡಿಮೆ ಬೆಲೆಗೆ ಕಲಿಕೆ ಲಭ್ಯ: ಇಲ್ಲಿನ ತಂತ್ರಜ್ಞಾನ ಪ್ರಗತಿ ದೇಶದ ಉನ್ನತಿಗೆ ಕೊಡುಗೆ ನೀಡುತ್ತಿದೆ. ಆಯುಷ್ಮಾನ್ ಭಾರತ್ ಕ್ರಾಂತಿ ಮೂಡಿಸಿದೆ. ಕೋವಿಡ್ ನಂತರದ ದಿನಗಳಲ್ಲಿ ಆನ್ಲೈನ್ ಕ್ಷೇತ್ರದ ಪ್ರಗತಿಯಲ್ಲಿ ಕ್ರಾಂತಿ ಮೂಡಿಸಿದೆ. ಆನ್ಲೈನ್ ಶಿಕ್ಷಣ ಜನಪ್ರಿಯ ಆಗ್ತಿದೆ. ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಗೆ ಕಲಿಕೆ ಲಭ್ಯವಿರುವುದು ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮಾತ್ರ ಎಂದು ಹೇಳಿದರು.
ಗ್ರಾಮೀಣ ಭಾರತ ಸಹ ಪ್ರಗತಿಯತ್ತ ಸಾಗಿದೆ. ಹಣಕಾಸು ಕ್ಷೇತ್ರ ಮುಂಚೂಣಿಗೆ ಬಂದಿದೆ. ಆರೋಗ್ಯ ಕ್ಷೇತ್ರ ಸಾಧನೆ ಮಾಡುತ್ತಿದೆ. ಭಾರತ ದೇಶ ತಂತ್ರಜ್ಞಾನವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿ ಬೆಳೆಯುತ್ತಿದೆ. ಕೋವಿಡ್ ನಂತರ ನಮ್ಮ ಸಹಕಾರ ಒಂದು ಹೆಜ್ಜೆ ಮುಂದೆ ಹೋಗಿದೆ.
ಟೆಕ್ ಸಮಿಟ್‌ನಿಂದ ದೇಶದ ಪ್ರಗತಿಗೆ ಕೊಡುಗೆ: ಡಿಜಿಟಲ್ ಪಾವತಿ ಇನ್ಸೆಂಟಿವ್ ನೀಡುತ್ತಿದೆ. ಸಣ್ಣ ವ್ಯಾಪಾರಿಗಳು ಸಹ ಸರ್ಕಾರದ ಸಹಾಯ, ಸಹಕಾರವನ್ನು ಪಡೆಯಲು ಅವಕಾಶ ಒದಗಿಸುವ ತಂತ್ರಜ್ಞಾನ ಬೆಳೆದಿದೆ. ಅಲ್ಲದೇ ಸಣ್ಣ ವ್ಯಾಪಾರಿಗಳು ತಮ್ಮ ಉತ್ಪನ್ನವನ್ನು ಸುಗಮವಾಗಿ ಆನ್ಲೈನ್ ಮೂಲಕ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುವ ಅವಕಾಶ ಲಭಿಸಿದೆ. ಭಾರತ ದೇಶ ಇಂದು ಸಾಕಷ್ಟು ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ವಿಶ್ವದ ಪ್ರಗತಿಯ ಜತೆ ನಾವು ಸಮನಾಗಿ ಸಹಕಾರಿಯಾಗಲು ಅನುವು ಮಾಡಿಕೊಟ್ಟಿದೆ. ಬೆಂಗಳೂರು ಟೆಕ್ ಸಮಿಟ್ ದೇಶದ ಪ್ರಗತಿಗೆ ಇನ್ನಷ್ಟು ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರತಿಯೊಬ್ಬರೂ ಹೊಸದೊಂದು ಯೋಚನೆ, ಆವಿಷ್ಕಾರ ಹೊತ್ತು ಬಂದಿದ್ದಾರೆ. ಈ ವೇದಿಕೆ ಎಲ್ಲರಿಗೂ ಸೂಕ್ತವಾಗಿ ಲಭಿಸಿದೆ. ತಂತ್ರಜ್ಞಾನ ಕ್ಷೇತ್ರದ ವಿಶ್ವವಾಗಿ ಟೆಕ್ ಸಮಿಟ್ ಒದಗಿ ಬಂದಿದೆ. ವಿಜ್ಞಾನದ ಎಲ್ಲಾ ಅವಕಾಶಗಳಿಗೆ ಇಲ್ಲಿ ವೇದಿಕೆ ಲಭಿಸಿದೆ.
25 ವರ್ಷದಲ್ಲಿ ಇದು ನಿರಂತರ ಪ್ರಗತಿ ಹೊಂದುತ್ತಲೇ ಇದೆ. ಅತ್ಯುತ್ತಮ ಆವಿಷ್ಕಾರಿ ನಾಯಕ ಎಂದರೆ ಸೃಷ್ಟಿಕರ್ತ. ಈತ ಎಲ್ಲವನ್ನೂ ಸೃಷ್ಟಿಸಿದ್ದಾನೆ. ಮಾನವನನ್ನು ಸೃಷ್ಟಿಸುವ ಜತೆಗೆ ಈ ಪ್ರಪಂಚದಲ್ಲಿ ಇದಕ್ಕೆ ಪೂರಕವಾದ ಅಗತ್ಯಗಳನ್ನೂ ಸೃಷ್ಟಿಸಿದ್ದಾನೆ. ವರ್ಷದಿಂದ ವರ್ಷಕ್ಕೆ ಇದು ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.
ಪರಿಸರಸ್ನೇಹಿ ತಂತ್ರಜ್ಞಾನ ಅಭಿವೃದ್ಧಿ: ಇಂದು ಪರಿಸರ ನಾಶ ಜಗತ್ತಿನ ವಿನಾಶದ ಕರೆಗಂಟೆಯಾಗಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ವಿನಾಶದತ್ತ ಸಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಏನನ್ನಾದರೂ ಬಿಟ್ಟು ಹೋಗಬೇಕು. ಇಂದಿನ ತಂತ್ರಜ್ಞಾನ ಬಳಕೆ, ಆವಿಷ್ಕಾರಗಳು ಭವಿಷ್ಯದ ವಿನಾಶವನ್ನು ತಡೆಯುವಂತದ್ದಾಗಬೇಕು. ಈ ಸಮ್ಮಿಟ್ನಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನ ಅಭಿವೃದ್ಧಿ ಮಾಡುವುದಕ್ಕೆ ಒತ್ತುಕೊಡುವಂತೆ ಮನವಿ ಮಾಡುತ್ತಿದ್ದೇನೆ.
ಇದನ್ನೂ ಓದಿ: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳೆ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ದೇಶ ಪ್ರಗತಿ ಹೊಂದಬೇಕು, ತಂತ್ರಜ್ಞಾನ ಕ್ರಾಂತಿ ಆಗಬೇಕು. ಆದರೆ ಇದು ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು. ಜೈವಿಕ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಆಗುತ್ತಿದೆ. ಕೃತಕ ಬುದ್ದಿಮತ್ತೆ ಕ್ಷೇತ್ರ ಪ್ರಗತಿ ಹೊಂದುತ್ತಿದೆ. ನಮ್ಮ ಹಿಂದಿನ ತಲೆಮಾರಿನವರು ಅನುಸರಿಸಿದ ಮಾರ್ಗ ಹಾಗೂ ಸೃಷ್ಟಿಕರ್ತ ಬಯಸಿದ ಪ್ರಪಂಚ ಉಳಿಸಿಕೊಂಡು ಮುಂದಿನವರಿಗೆ ಬಿಟ್ಟು ಹೋಗಬೇಕಿದೆ. ತಂತ್ರಜ್ಞಾನದ ಕ್ರಾಂತಿ ರಾಜ್ಯ, ದೇಶದ ಪ್ರಗತಿಗೆ ಪೀರಕವಾಗಿರಲಿ. ಇಂತ ಕಾರ್ಯಕ್ರಮ ಗಳು ಇದಕ್ಕೆ ತಳಪಾಯಗಳಾಗಲಿ ಎಂದು ಆಶಿಸಿದರು.
ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ಸಿಎಂ ಮನವಿ: ಕರ್ನಾಟಕ ಜ್ಞಾನದ ಹಬ್ ಆಗಿದೆ. ಜ್ಞಾನ ಹೆಚ್ಚಿಸಿಕೊಳ್ಳಲು ಬನ್ನಿ. ಮುಂದಿನ ಹತ್ತು ವರ್ಷ ದೇಶದಲ್ಲಿ ಸಾಕಷ್ಟು ಹೊಸ ಕ್ರಾಂತಿ ಮಾಡಲಿದೆ. ಜನಸಂಖ್ಯೆಯ ಶೇ.40 ರಷ್ಟು ಮಂದಿ ನಗರದಲ್ಲಿ ತಂಗಲಿದ್ದಾರೆ. ಉತ್ತಮ ನಗರ ನಿರ್ಮಿಸಲು ತಂತ್ರಜ್ಞಾನ ಕ್ಷೇತ್ರದ ಸಾಧಕರು ನಮ್ಮ ಕೈಜೋಡಿಸಬೇಕು. ಮುಂದೆ ಸುರಕ್ಷಿತ ಆರೋಗ್ಯ ಕಾಣುವ ಅಗತ್ಯವಿದೆ. ಕೋವಿಡ್ ಒಂದು ಸಣ್ಣ ಉದಾಹರಣೆಯಾಗಿದ್ದು, ಆರೋಗ್ಯವಂತ ಭಾರತವನ್ನು ಕಾಣಲು ತಂತ್ರಜ್ಞಾನ ಕ್ಷೇತ್ರದವರ ಸಹಕಾರ ಅಗತ್ಯವಿದೆ. ನಾವು ಹೊಸ ಶಿಕ್ಷಣ ನೀತಿ, ಆರೋಗ್ಯ ನೀತಿ ತಂದಿದ್ದೇವೆ. ನಾಡನ್ನು ಇನ್ನಷ್ಟು ಬಲವಾಗಿ ಕಟ್ಟಲು ಸಹಕಾರ ನೀಡಿ ಎಂದು ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಆರು ಹೈಟೆಕ್ ನಗರ ನಿರ್ಮಿಸುವ ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಹೊರ ಭಾಗ, ಬೆಳಗಾವಿ, ಮಧ್ಯ ಕರ್ನಾಟಕದಲ್ಲಿ ಆಗಲಿದೆ. ಬೆಂಗಳೂರಿನ ದೇವನಹಳ್ಳಿ ವಿಮಾನನಿಲ್ದಾಣ ಬಳಿ ಜ್ಞಾನ ನಗರ ನಿರ್ಮಿಸುತ್ತಿದ್ದೇವೆ. ಸ್ಟಾರ್ಟ್ ಅಪ್ ಗಳು ಮುಂದಿನ ಭವಿಷ್ಯ. ಇವನ್ನು ರಾಜ್ಯಕ್ಕೆ ಸೆಳೆಯಲು ಸ್ಟಾರ್ಟ್ ಅಪ್ ಪಾರ್ಕ್ ಸ್ಥಾಪಿಸುತ್ತೇವೆ. ಏರ್ಪೋರ್ಟ್ ಸಮೀಪವೇ ಇನ್ನಾರು ತಿಂಗಳಲ್ಲಿ ಇದು ಸ್ಥಾಪನೆ ಆಗಲಿದೆ ಎಂದರು.