ಬೆಂಗಳೂರು: ಸುಮಲತಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಇವರೊಂದಿಗೆ ಪ್ರಮುಖ ಅನುಭವಿ ರಾಜಕೀಯ ನಾಯಕರು ಇಲ್ಲ. ಹೀಗಾಗಿ ನಾಮಪತ್ರ ಭರ್ತಿ ಮಾಡುವ ವೇಳೆ ನೀಡುವ ಮಾಹಿತಿ ಲಗತ್ತಿಸಬೇಕಾದ ದಾಖಲೆಗಳಲ್ಲಿ ಏನಾದರೂ ಲೋಪಲಾಗಿ ನಾಮಪತ್ರ ಸ್ವೀಕೃತಿಗೆ ತೊಡಕಾದರೆ ಏನು ಎನ್ನುವ ಪ್ರಶ್ನೆ ಇದೀಗ ರಾಜ್ಯದ ಬಿಜೆಪಿ ನಾಯಕರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ನಾಮಪತ್ರದಲ್ಲಿ ವ್ಯತ್ಯಾಸಗಳಾಗಿ ಹೆಚ್ಚು ಕಡಿಮೆಯಾದರೆ ಏನು ಎನ್ನುವ ಹೊಸ ಚಿಂತೆ ರಾಜ್ಯ ಬಿಜೆಪಿಯನ್ನು ಕಾಡತೊಡಗಿದೆ. ಇದರಿಂದಾಗಿ ಬಿಜೆಪಿಯಲ್ಲಿನ ಗೊಂದಲ ಮತ್ತಷ್ಟು ಹೆಚ್ಚಾಗಿದೆ.
ಹೌದು, ಮಂಡ್ಯದಲ್ಲಿ ಅಭ್ಯರ್ಥಿ ಆಗಬೇಕೇ ಬೇಡವೇ ಎನ್ನುವ ಗೊಂದಲದಲ್ಲಿದ್ದ ಬಿಜೆಪಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿದರೆ ಅವರನ್ನು ಬೆಂಬಲಿಸೋಣ ಎನ್ನುವ ನಿಲುವು ತಾಳಿತ್ತು. ಇಂದು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಇದೀಗ ಬಿಜೆಪಿಗೆ ಮತ್ತೊಂದು ತಲೆಬಿಸಿ ಸೃಷ್ಠಿಯಾಗಿದೆ.
ಈವರೆಗೂ ರಾಜಕೀಯದಲ್ಲಿ ಇಲ್ಲದೇ ಇದ್ದ ಸುಮಲತಾ ಮೊದಲ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿರುವ ಅನುಭವ ಇಲ್ಲ. ಜೊತೆಯಲ್ಲಿ ಪ್ರಮುಖ ಅನುಭವಿ ರಾಜಕೀಯ ನಾಯಕರೂ ಕೂಡ ಇಲ್ಲ. ಹೀಗಾಗಿ ನಾಮಪತ್ರ ಭರ್ತಿ ಮಾಡುವ ವೇಳೆ ನೀಡುವ ಮಾಹಿತಿ ಲಗತ್ತಿಸಬೇಕಾದ ದಾಖಲೆಗಳಲ್ಲಿ ಏನಾದರೂ ಲೋಪಲಾಗಿ ನಾಮಪತ್ರ ಸ್ವೀಕೃತಿಗೆ ತೊಡಕಾದರೆ ಏನು ಎನ್ನುವ ಪ್ರಶ್ನೆ ಇದೀಗ ರಾಜ್ಯದ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಮುಖಭಂಗವಾಗುವಂತಾಗಿತ್ತು. ಇದೀಗ ಅಂತಹ ಸಾಧ್ಯತೆ ಇಲ್ಲ. ಸುಮಲತಾ ಕಣದಿಂದ ಹಿಂದೆ ಸರಿಯುವುದು ಕಷ್ಟಸಾಧ್ಯ. ಆದರೆ ನಾಮಪತ್ರ ಒಂದು ವೇಳೆ ತಿರಸ್ಕಾರವಾದರೆ ಏನು ಎನ್ನುವುದು ಹೊಸ ಸಮಸ್ಯೆಯಾಗಿದೆ. ಬಿಜೆಪಿ ವರಿಷ್ಠರು ಕೂಡ ಅಭ್ಯರ್ಥಿ ಹಾಕದೇ ಇರುವ ನಿಲುವಿನ ಬಗ್ಗೆ ಮತ್ತೊಮ್ಮೆ ಯೋಚಿಸಿ ಎಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಂತರ ಸಲಹೆ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಹಿನ್ನೆಲೆ ಮೊದಲು ಪಕ್ಷದ ಅಭ್ಯರ್ಥಿ ಕಣಕ್ಕಿಳಿಯಲಿ. ನಾಮಪತ್ರ ಪರಿಶೀಲನೆ ನಂತರ ಬೇಕಿದ್ದರೆ ನಾಮಪತ್ರ ವಾಪಸ್ ಪಡೆದುಕೊಂಡರಾಯಿತು ಎನ್ನುವ ಚಿಂತನೆ ಆರಂಭಿಸಿದ್ದಾರೆ.
ಪಕ್ಷದ ಆಂತರಿಕ ಮೂಲಗಳ ಪ್ರಕಾರ ಮಾರ್ಚ್ 27 ರವೆಗೂ ಪಕ್ಷದ ಅಭ್ಯರ್ಥಿ ಕಣದಲ್ಲಿ ಇರಲಿ. 27 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಂತರ 29 ರವರೆಗೂ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದ್ದು, ಅಷ್ಟರಲ್ಲಿ ನಾಮಪತ್ರ ವಾಪಸ್ ಪಡೆದುಕೊಂಡರಾಯಿತು. ಎಲ್ಲವನ್ನೂ ಕಡೇ ಗಳಿಗೆಯಲ್ಲಿ ಯೋಚಿಸಿ ಫಲವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಯಿಂದ ಹಿಂದಿರುಗುತ್ತಿದ್ದು, ಅವರೊಂದಿಗೆ ಪಕ್ಷದ ನಾಯಕರು ಮತ್ತೊಮ್ಮೆ ಈ ಸಂಬಂಧ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.