ಬೆಂಗಳೂರು : ತಂದೆಯ ಸಾವಿನ ನೋವಿನಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನ ವೈಷ್ಣವಿ ಎಂಬ ವಿದ್ಯಾರ್ಥಿನಿ ಬರೆದಿದ್ದಾಳೆ. ನಿನ್ನೆ ತಡರಾತ್ರಿ ಹೃದಯಘಾತದಿಂದ ವೈಷ್ಣವಿ ತಂದೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಇದ್ದರೂ, ಪರೀಕ್ಷೆಗೆ ತಪ್ಪಿಸಿಕೊಳ್ಳದೇ ನೋವಿನಲ್ಲೇ ಹಾಜರಾಗಿದ್ದಾರೆ.
ಬಿ. ವೈಷ್ಣವಿ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ನ ವಿದ್ಯಾರ್ಥಿನಿಯಾಗಿದ್ದಾರೆ. ಕೆಪಿಎಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಇಂದು ನಡೆದ ಗಣಿತ ಪರೀಕ್ಷೆಯನ್ನ ಬರೆದಿದ್ದಾರೆ. ಪರೀಕ್ಷೆ ಬರೆದ ಕೂಡಲೇ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಸಿಎಂ ನಿವಾಸಕ್ಕೆ ಸ್ಕೃತಿ ಇರಾನಿ ಭೇಟಿ: ಡ್ಯಾಶ್ ಬೋರ್ಡ್ ಕುರಿತು ಚರ್ಚೆ
ವರ್ಷವಿಡೀ ಓದಿ ಪರೀಕ್ಷೆಗೆ ತೊಂದರೆ : ಪರೀಕ್ಷೆ ಬರೆಯುವಂತೆ ಕುಟುಂಬಸ್ಥರಿಂದ ಸಲಹೆ ಬಂದಿದೆ. ಇತ್ತ ತಂದೆಯನ್ನ ನೆನೆದು ಕಣ್ಣೀರು ಹಾಕುತ್ತಲೇ ಪರೀಕ್ಷಾ ಕೇಂದ್ರಕ್ಕೆ ವೈಷ್ಣವಿ ಬಂದಿದ್ದರು. ಈಗಾಗಲೇ ಎರಡು ಪರೀಕ್ಷೆಗಳನ್ನ ಬರೆದಿದ್ದು, ಇಂದು ಗಣಿತ ಪರೀಕ್ಷೆ ಬರೆದಿದ್ದೇನೆ. ನಮ್ಮ ತಂದೆ ಫಸ್ಟ್ ಕ್ಲಾಸ್ನಲ್ಲಿ ಪಾಸಾಗು ಅಂತಾ ಹೇಳಿದ್ರು. ನಿನ್ನೆ ನನ್ನ ಜೊತೆ ಮಾತಾಡಿದ್ರು, ನೀರು ಕೇಳಿದ್ರು.
ಚೆನ್ನಾಗಿಯೇ ಇದ್ರು, ಏನಾಯ್ತು ಅಂತಾ ಗೊತ್ತಿಲ್ಲ. ಏನೇ ಬೇಕಿದ್ರೂ ವೈಷ್ಣವಿ, ವೈಷ್ಣವಿ ಅಂತಾ ಕೇಳ್ತಿದ್ದರು ಎಂದು ತಂದೆಯನ್ನ ನೆನೆದು ವಿದ್ಯಾರ್ಥಿನಿ ಕಣ್ಣೀರು ಹಾಕಿದರು. ಇವತ್ತು ಪರೀಕ್ಷೆಯನ್ನ ಬರೆಯೋಕೆ ಅಮ್ಮ ಹೇಳಿ ಕಳುಹಿಸಿದ್ರು. ಎರಡು ಪರೀಕ್ಷೆಗಳನ್ನ ಚೆನ್ನಾಗಿ ಬರೆದಿದ್ದೇನೆ. ನಾನು ಡಾಕ್ಟರ್ ಆಗಬೇಕೆನ್ನುವ ಕನಸು ಇದೆ, ಪರೀಕ್ಷೆ ಮುಗಿಸಿ ನಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗ್ತಿನಿ ಎಂದು ತಿಳಿಸಿದರು.