ಬೆಂಗಳೂರು: ಹೆತ್ತ ಮಕ್ಕಳಿಗೆ ಮತ್ತು ಮನೆಯವರಿಗೆ ಬೇಡವಾಗಿ ಅದೆಷ್ಟೋ ತಂದೆ-ತಾಯಂದಿರು, ವೃದ್ಧರು, ಹಿರಿಯ ನಾಗರಿಕರು ಬೀದಿಗೆ ಬಿದ್ದಿದ್ದಾರೆ. ಅಂತಹವರ ನೆರವಿಗೆ ಇದೀಗ ನಗರ ಪೊಲೀಸರು ನಿಂತಿದ್ದಾರೆ. ಆಸ್ತಿಗಾಗಿ ತಮ್ಮ ತಂದೆ-ತಾಯಯನ್ನೇ ಕೊಲ್ಲುತ್ತಿರುವ ಈ ದಿನಗಳಲ್ಲಿ ಪೊಲೀಸರು ಆಸರೆಯಾಗಿ ನಿಂತಿರೋದು ಹಿರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಬೆಂಗಳೂರು ಎಲ್ಡರ್ಸ್ ಪ್ರೊಟೆಕ್ಷನ್ ಪ್ರಾಜೆಕ್ಟ್ನನ್ನು ಪೊಲೀಸ್ ಇಲಾಖೆ ಆರಂಭ ಮಾಡಿದೆ. ಈಗಾಗಲೇ ಯಾವ ಯಾವ ಏರಿಯಾದಲ್ಲಿ ವೃದ್ಧರಿದ್ದಾರೆ, ಎಷ್ಟು ಜನರಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ. ಪ್ರತಿದಿನ ಕೌಟುಂಬಿಕ ಕಲಹಕ್ಕೆ ಹೆಚ್ಚು ವೃದ್ಧರೇ ಬಲಿಯಾಗುತ್ತಿದ್ದಾರೆ. ಅವರು ಹೆತ್ತ ಮಕ್ಕಳೇ ಅವರ ವಿರುದ್ಧ ತಿರುಗಿ ಬಿದ್ದು ಹಲ್ಲೆ,ಕೊಲೆಯಂತಹ ಕೃತ್ಯಗಳನ್ನ ಎಸಗುತ್ತಿದ್ದಾರೆ. ಇದರಿಂದಾಗಿ ಹಿರಿಯ ನಾಗರಿಕರು ತಮ್ಮ ಮನೆಯಲ್ಲೇ ಭಯದಿಂದಲೇ ಬದುಕುವಂತಾಗಿದೆ ಎಂದರು.
ಅದೆಷ್ಟೋ ಜನ ವೃದ್ಧರು ಶ್ರೀಮಂತರಾಗಿದ್ದರೂ, ಅವರ ಮಕ್ಕಳಿಂದಾಗಿ ಭಿಕ್ಷುಕರಾಗಿರುವ ಅನೇಕ ಸಾಕ್ಷಿಗಳಿವೆ. ಹೀಗಾಗಿ ವೃದ್ಧರ ಮೇಲಿನ ಕಿರುಕುಳವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದಂದು www.stopelderabuse.in ವೆಬ್ ಸೈಟ್ಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಬಹುದಾಗಿದೆ.
ಹೊಸದಾಗಿ ಆರಂಭಗೊಂಡಿರುವ ಸಹಾಯವಾಣಿ ಕೇಂದ್ರವು ಸಾಕಷ್ಟು ಮಂದಿಗೆ ಸಹಾಯವಾಗಲಿದೆ. ಈ ಸಂಬಂಧ ಪೊಲೀಸ್ ಠಾಣೆಗಳಲ್ಲೇ ವಿಶೇಷ ಸಿಬ್ಬಂದಿಯನ್ನ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಇನ್ಮಂದೆ ವೃದ್ದರು ತಮ್ಮ ಮೇಲೆ ನಡೆಯುವ ಕಿರುಕುಳದ ಬಗ್ಗೆ ಪೊಲೀಸರಲ್ಲಿ ದೂರು ನೀಡಿ ಪರಿಹರಿಸಿಕೊಳ್ಳಬಹುದಾಗಿದೆ.