ಬೆಂಗಳೂರು: ಜಾಗತಿಕವಾಗಿ ಸೈಬರ್ ಕ್ರೈಂ ದೊಡ್ಡ ಸಮಸ್ಯೆಯಾಗಿದ್ದು ಇದಕ್ಕೆ ಬೆಂಗಳೂರು ನಗರ ಕೂಡ ಹೊರತಾಗಿಲ್ಲ. ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿಯೂ ಉಸಿರಾಟದಷ್ಟೇ ಸಲೀಸಾಗಿರುವ ಡಿಜಿಟಲ್ ವ್ಯವಹಾರದಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆನ್ಲೈನ್ ವಂಚನೆ ಮೂಲಕ ಸೈಬರ್ ಖದೀಮರ ಪಾಲಾಗುತ್ತಿದ್ದ 48 ಕೋಟಿಗಿಂತ ಹೆಚ್ಚು ಹಣವನ್ನು ನಗರ ಪೊಲೀಸರು ತಪ್ಪಿಸಿದ್ದಾರೆ.
ನಗರದಲ್ಲಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಬ್ಯಾಂಕ್ ಖಾತೆಗಳಿಂದ ಕನ್ನ ಹಾಕುವುದನ್ನು ತಡೆದು ಗ್ರಾಹಕರ ಹಣಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೈಗೊಂಡ ಗೋಲ್ಡನ್ ಆವರ್ ಯೋಜನೆಗೆ ಉತ್ತಮ ಫಲಿತಾಂಶ ದೊರೆತಿದೆ. ವಂಚನೆ ಹಾದಿ ಹಿಡಿದು ಖದೀಮರ ಪಾಲಾಗುತ್ತಿದ್ದ 48.24 ಕೋಟಿ ರೂ.ತಡೆಯುವಲ್ಲಿ ಸಫಲರಾಗಿದ್ದಾರೆ.
ಬ್ಯಾಂಕ್ಗಳ ಹೆಸರಿನಲ್ಲಿ ಕರೆ ಮಾಡುವ ಖದೀಮರು ಕ್ರೆಡಿಟ್ ಕಾರ್ಡ್ ನವೀಕರಣ, ಸಾಲ ನೀಡುವುದು ಸೇರಿ ವಿವಿಧ ಐಡಿಯಾಗಳನ್ನು ಉಪಯೋಗಿಸಿ ಓಟಿಪಿ ಕಳುಹಿಸಿಕೊಂಡು ಕ್ಷಣಾರ್ಧದಲ್ಲಿ ಗ್ರಾಹಕರ ಖಾತೆಗಳಿಂದ ಹಣ ಎಗರಿಸುತ್ತಿದ್ದ ಖದೀಮರಿಗೆ ನಗರ ಪೊಲೀಸರು ಕೈಗೊಂಡ ಕ್ರಮದಿಂದ ಹಿನ್ನಡೆಯಾಗಿದೆ.
ಕಳೆದ ವರ್ಷ ಡಿಸೆಂಬರ್ 22 ರಿಂದ ಇದುವರೆಗೂ 3,175 ಹಣಕಾಸು ವಂಚನೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದು, ಈ ಪೈಕಿ 1,312 ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ವಂಚಕರ ಜೇಬು ಸೇರುತ್ತಿದ್ದ ಸುಮಾರು 48.24 ಕೋಟಿ ತಪ್ಪಿಸಿಲಾಗಿದೆ. ಈ ಮೂಲಕ ಹಣಕಾಸು ವಂಚನೆ ಜಾಲಕ್ಕೆ ಬ್ರೇಕ್ ಹಾಕಿದೆ. ಆದರೆ ಇದುವರೆಗೂ ಒಬ್ಬ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿಲಾಗಿಲ್ಲ.
ಕೊರೊನಾ ಸಂಕಷ್ಟ ಕಾಲದಲ್ಲಿಯೂ ವಿವಿಧ ಮಾರ್ಗಗಳಿಂದ ಜನರನ್ನು ಯಾಮಾರಿಸಿ ಹಣ ದೋಚುತ್ತಿದ್ದ ಸೈಬರ್ ಆರೋಪಿಗಳಿಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಸಿಸ್ಟಂ ಯೋಜನೆ ಮುಳುವಾಗಿದೆ. ಸೈಬರ್ ವಂಚನೆಗೊಳಗಾದವರು 112 ಆಥವಾ 100 ಕರೆ ಮಾಡಿದರೆ ಕಮೀಷನರ್ ಕಚೇರಿಯಲ್ಲಿ ಡಿಸಿಪಿ ಇಶಾಪಂತ್ ನೇತೃತ್ವದಲ್ಲಿರುವ ಕಮಾಂಡ್ ಸೆಂಟರ್ಗೆ ಕರೆ ವರ್ಗಾವಣೆಯಾಗಲಿದೆ. ಸಮಸ್ಯೆ ಬಗ್ಗೆ ದೂರು ನೀಡಿದರೆ, ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನ ಸಂಪರ್ಕಿಸಿ, ಖಾತೆಯನ್ನು ಸ್ಥಗಿತಗೊಳಿಸಲಿದ್ದಾರೆ. ಹ್ಯಾಕ್ ಒಳಗಾದ ಆಥವಾ ವಂಚನೆ ಒಳಗಾದ ಎರಡು ಗಂಟೆಯೊಳಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿದರೆ ವಂಚಕರಿಗೆ ಹಣ ಎಗರಿಸಲು ಸಾಧ್ಯವಿಲ್ಲ.
ಬ್ಯಾಂಕ್ ಹೆಸರಿನಲ್ಲಿ ಹಣ ದೋಚಿದ್ರು:
ಕಳೆದ ಮೇ 24ರಂದು ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಅಕೌಂಟ್ ಅಪಡೇಟ್ ಮಾಡಲಾಗುತ್ತಿದೆ ಎಂದು ಹೇಳಿ ನಿಮ್ಮ ಮೊಬೈಲಿಗೆ ಬಂದಿರುವ ಒಟಿಪಿ ಕಳುಹಿಸಿ ಎಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದಾರೆ. ಇದನ್ನು ನಂಬಿ ಖದೀಮರಿಗೆ ಒಟಿಪಿ ಕಳುಹಿಸಿದ್ದಾರೆ. ಕ್ಷರ್ಣಾರ್ಧದಲ್ಲಿ 67,999 ರೂಪಾಯಿ ಹಣ ಎಗರಿಸಿದ್ದಾರೆ. ಇದರಿಂದ ಅನುಮಾನಗೊಂಡು ಕೂಡಲೇ 112 ಕರೆ ಮಾಡಿ ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಇದರಿಂದ ಅಕೌಂಟ್ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾಗಿದೆ ಎನ್ನುತ್ತಾರೆ ವಂಚನೆಗೆ ಒಳಗಾಗಿದ್ದ ರಾಜಶೇಖರ್. ಇದೇ ರೀತಿ ನಗರದ ಹಲವೆಡೆ ಖದೀಮರಿಂದ ವಂಚನೆಗೆ ಒಳಗಾದವರು ಕಮಾಂಡ್ ಸೆಂಟರ್ಗೆ ಮಾಹಿತಿ ನೀಡಿ ಬ್ಯಾಂಕ್ ಅಕೌಂಟ್ ತಾತ್ಕಾಲಿಕವಾಗಿ ಸ್ಥಗಿತಕ್ಕೆ ಮನವಿ ಮಾಡಿ ತಮ್ಮ ಹಣವನ್ನು ಉಳಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯದಿಂದ ಕೋಟ್ಯಂತರ ರೂಪಾಯಿ ಕಳ್ಳರ ಪಾಲಾಗುವುದು ತಪ್ಪಿದೆ.
ವಂಚನೆಗೆ ಒಳಗಾದವರು ಕೂಡಲೇ ಮಾಹಿತಿ ನೀಡಿದ್ದರಿಂದ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು. ಈ ಮೂಲಕ ಖದೀಮರ ಪಾಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿಲಾಗಿದೆ. ಬಳಿಕ ಆಯಾ ಪೊಲೀಸ್ ಠಾಣೆಗಳಿಗೆ ಎಫ್ಐಆರ್ ದಾಖಲಿಸಲು ಶಿಫಾರಸ್ಸು ಮಾಡಲಾಗುತ್ತದೆ. ಸಾರ್ವಜನಿಕರು ಅಪರಿಚಿತರಿಂದ ವಂಚನೆ ಒಳಗಾದರೆ ಕೂಡಲೇ 112 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮನವಿ ಮಾಡುತ್ತಾರೆ.
ಕಳೆದ ಆರು ತಿಂಗಳಲ್ಲಿ ನಗರ ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ಹಣಕಾಸು ವಂಚನೆಗೆ ಸಂಪ್ರಕರಣ ದಾಖಲಾಗಿದೆ. ಈ ವಿಭಾಗದಲ್ಲಿ 615 ಬ್ಯಾಂಕ್ ಖಾತೆ ಬ್ಲಾಕ್ ಮಾಡಿದ್ದರೆ, ಕೇಂದ್ರ ವಿಭಾಗದದಲ್ಲಿ 79 ಅಕೌಂಟ್ಗಳನ್ನ ಮಾತ್ರ ಸ್ಥಗಿತಗೊಳಿಸಲಾಗಿದೆ.
ನಗರ ಎಂಟು ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ಸೀಜ್ ಮಾಡಿದ ಪ್ರಕರಣಗಳ ಮಾಹಿತಿ
ನಗರ ಕೇಂದ್ರ ವಿಭಾಗ- 79
ಉತ್ತರ ವಿಭಾಗ- 521
ಆಗ್ನೇಯ ವಿಭಾಗ- 595
ದಕ್ಷಿಣ ವಿಭಾಗ -615
ವೈಟ್ ಫೀಲ್ಡ್ -439
ಪೂರ್ವ ವಿಭಾಗ -439
ಪಶ್ಚಿಮ ವಿಭಾಗ -351
ಈಶಾನ್ಯ ವಿಭಾಗ- 106