ಬೆಂಗಳೂರು : ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದಡಿ ಮಗನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬೇಗೂರಿನ ಮೈಲಸಂದ್ರ ಗ್ರಾಮದ ಫಾತಿಮಾ ಮೇರಿ ಕೊಲೆಯಾಗಿದ್ದು, ಈ ಕೃತ್ಯವೆಸಗಿದ ಆರೋಪದಡಿ ಮಗ ದೀಪಕ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕೊಲೆಯಾದ ಫಾತಿಮಾ ಮೇರಿ-ಗಂಡ ಆರೋಗ್ಯ ಸ್ವಾಮಿ ದಂಪತಿಗೆ ಓರ್ವ ಹೆಣ್ಣು, ಓರ್ವ ಗಂಡು ಮಗ ಇದ್ದಾನೆ. 24 ವರ್ಷದ ದೀಪಕ್ 8ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ. ತಂದೆ-ತಾಯಿ ಜೊತೆಗೆ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದ. ಈ ವ್ಯಾಪಾರವೇ ಕುಟುಂಬಕ್ಕೆ ಆಧಾರವಾಗಿತ್ತು. ಕೆಲದಿನಗಳ ಹಿಂದೆ ದೀಪಕ್ ತಾಯಿಗೆ ಹೊಸ ಮೊಬೈಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ.
ತಮ್ಮ ಬಳಿ ಹಣವಿಲ್ಲ ಮುಂದೊಂದು ದಿನ ಕೊಡಿಸುವೆ ಎಂದ ಫಾತಿಮಾ ಆಶ್ವಾಸನೆ ನೀಡಿದ್ದರು. ಇದರಿಂದ ಸಮಾಧಾನಗೊಳ್ಳದ ದೀಪಕ್ ದಿನೇದಿನೆ ಮೊಬೈಲ್ ಕೊಡಿಸುವಂತೆ ಒತ್ತಡ ಹಾಕುತ್ತಿದ್ದ.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಹರ್ಷದ್ ಕಾಲಿಗೆ ಗುಂಡೇಟು
ಹೊಸ ಮೊಬೈಲ್ ಕೊಡಿಸುವಷ್ಟು ತಮ್ಮ ಬಳಿ ಹಣವಿಲ್ಲ ಎಂದು ಪುನರುಚ್ಚಿಸಿದರೂ ಮಾತು ಕೇಳದ ಮಗ ನಿನ್ನೆ ಮನೆ ಬಳಿ ಸೊಪ್ಪು ಕೊಯ್ಯುವಾಗ ಸೀರೆಯಿಂದ ಆಕೆಯ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆ ಬಳಿಯಿದ್ದ 700 ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೀಪಕ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.