ಬೆಂಗಳೂರು: ಭೂ ಸುಧಾರಣೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಮತ್ತಿತರೆ ನೀತಿಗಳನ್ನು ವಿರೋಧಿಸಿ ರಾಜ್ಯದ ವಿವಿಧ ರೈತರಪರ ಸಂಘಟನೆಗಳು ವಿಧಾನ ಮಂಡಲ ಅಧಿವೇಶನದಲ್ಲಿ ಕಾಯ್ದೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಇಂದು ನಾಲ್ಕು ದಿಕ್ಕುಗಳಲ್ಲಿ ರೈತರು ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ.
ಇಂದು ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರನ್ನು ತೆರಳದ ರೀತಿ ರೈತ ಪರ ಸಂಘಟನೆಗಳು ತಡೆಗಟ್ಟಲಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆಯಂತೆ ನಗರದ ಹಲವೆಡೆ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಮೈಸೂರು ಬ್ಯಾಂಕ್ ವೃತ್ತದಿಂದ ಚಳುವಳಿ ಆರಂಭವಾಗುವ ಕಾರಣ ಕೆ.ಜಿ ರಸ್ತೆಯಲ್ಲಿ ಸಂಚಾರವನ್ನು ಅಂದ್ರೆ ಪೊಲೀಸ್ ಕಾರ್ನರ್ ಬಳಿ ಕೆ.ಜಿ ರಸ್ತೆಗೆ ಎಡ ತಿರುವು ಪಡೆದುಕೊಂಡು ಸಾಗುತ್ತಿದ್ದ ಸಂಚಾರ ನಿರ್ಬಂಧ ಮಾಡಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ.ಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್ನಿಂದ ನೇರವಾಗಿ ನೃಪತುಂಗ ರಸ್ತೆಗೆ ಪ್ರವೇಶ ತೆಗೆದುಕೊಂಡು, ನೃಪತುಂಗ ರಸ್ತೆಯಲ್ಲಿ ಸಾಗಿ ಕೆಆರ್ ವೃತ್ತದಿಂದ ಹೋಗಬಹುದಾಗಿದೆ.
ನೃಪತುಂಗ ರಸ್ತೆಯಲ್ಲಿ ಪ್ರಸ್ತುತ ಏಕಮುಖ ಸಂಚಾರವನ್ನು ದ್ವಿಮುಖ ಸಂಚಾರ ವ್ಯವಸ್ಥೆಗೆ ಪರಿವರ್ತಿಸಿ ಅಂದ್ರೆ ಕೆ.ಆರ್ ವೃತ್ತದಿಂದ ಪೊಲೀಸ್ ಕಾರ್ನರ್ವರೆಗೆ ಪೊಲೀಸ್ ಕಾರ್ನರ್ನಿಂದ ಕೆ.ಆರ್ ವೃತ್ತದವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮತ್ತೊಂದೆಡೆ ಭಾರತ್ ಬಂದ್ಗೆ ಸುಮಾರು 32 ಸಂಘಟನೆಗಳು ಕೈ ಜೋಡಿಸಿದ ಕಾರಣ ಪ್ರಮುಖ ವಾಹನಗಳು ಸಂಚರಿಸುವ ರಸ್ತೆಗಳನ್ನು ಪ್ರತಿಭಟನಾಕಾರರು ತಡೆಯಲಿದ್ದಾರೆ. ಹೀಗಾಗಿ ನಗರ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತರು, ಡಿಸಿಪಿಗಳು, ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಮಹಿಳಾ ಸಿಬ್ಬಂದಿ, ಪುರುಷ ಕಾನ್ಸ್‌ಟೇಬಲ್, ಅಗ್ನಿಶಾಮಕ ಸಿಬ್ಬಂದಿ, ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.