ಬೆಂಗಳೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ 15 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿದ್ದು, ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.
ಕರ್ಫ್ಯೂ ಜಾರಿ ಹಿನ್ನೆಲೆ ರಾಜ್ಯ ಸರ್ಕಾರ 10 ಗಂಟೆಯವರೆಗೆ ವ್ಯಾಪಾರ ವಾಹಿವಾಟಿಗೆ ಅನುಮತಿ ಕೊಟ್ಟಿದೆ. ಹಾಗಾಗಿ ತರಕಾರಿ, ಹಣ್ಣು, ದಿನಸಿ ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಜನರು ಮುಗಿಬೀಳುತ್ತಿದ್ದಾರೆ. ನಗರದ ಸಿಟಿ ಮಾರ್ಕೆಟ್ನಲ್ಲಿ ವ್ಯಾಪಾರ ವಾಹಿವಾಟು ಜೋರಾಗಿದ್ದು, ಮಾಸ್ಕ್ ಧರಿಸಿ ಜನಸಾಮಾನ್ಯರು ಖರೀದಿಗೆ ಮುಂದಾಗಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿರುವುದು ಸಹ ಕಂಡು ಬರುತ್ತಿದೆ.
ಮಾರ್ಷಲ್ಗಳ ನೇಮಕ:
ಹೆಚ್ಚು ಜನ ಸೇರುತ್ತಿದ್ದ ಹಿನ್ನೆಲೆ 20ಕ್ಕೂ ಹೆಚ್ಚು ಮಾರ್ಷಲ್ಗಳನ್ನು ನಗರದ ಒಂದೊಂದು ಮಾರುಕಟ್ಟೆಗೆ ನಿಯೋಜಿಸಲಾಗಿದೆ. ಹಾಗೆಯೇ ಸ್ಥಳದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೂಡ ರೌಂಡ್ಸ್ ಹಾಕುತ್ತಿದ್ದು, ಮಾಸ್ಕ್ ಕಡ್ಡಾಯವಾಗಿ ಹಾಕಬೇಕು, 10 ಗಂಟೆಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸುತ್ತಿದ್ದಾರೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ಜನಜಂಗುಳಿ:
2ನೇ ದಿನವೂ ಸಿಲಿಕಾನ್ ಸಿಟಿ ಮಂದಿ ನಗರವನ್ನು ತೊರೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳತ್ತ ತೆರಳಲು ಪ್ರಯಾಣಿಕರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿಯೇ ಬೀಡು ಬಿಟ್ಟಿದ್ದಾರೆ. ನಿನ್ನೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ಇಂದು ತಮ್ಮ ಊರುಗಳತ್ತ ತೆರಳಲು ರೈಲಿಗಾಗಿ ಕಾಯುತ್ತಿದ್ದಾರೆ.