ಬೆಂಗಳೂರು ಒಂದು ವಾರ ಲಾಕ್ಡೌನ್: ಈ ಎಲ್ಲಾ ನಿಯಮ, ನಿರ್ಬಂಧಗಳು ನಿಮಗೆ ಗೊತ್ತಿರಲಿ.. - ಬೆಂಗಳೂರು
ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಒಂದು ವಾರಗಳ ಕಾಲ ಲಾಕ್ಡೌನ್ ಆಗಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಂಜೆ ಸುದ್ದಿಗೋಷ್ಟಿ ನಡೆಸಿ ಸಾರ್ವಜನಿಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವ ಹಿನ್ನೆಲೆ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಒಂದು ವಾರಗಳ ಕಾಲ ಲಾಕ್ಡೌನ್ ಆಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಸಂಜೆ ಸುದ್ದಿಗೋಷ್ಟಿ ನಡೆಸಿದರು.
ರಾಜ್ಯ ಸರ್ಕಾರ ಇವತ್ತು ರಾತ್ರಿ 8 ಗಂಟೆಯಿಂದ ಬರುವ 22ರ ಮುಂಜಾನೆ 5 ಗಂಟೆಯವರೆಗೆ ಲಾಕ್ಡೌನ್ ಜಾರಿ ಮಾಡಿ 144 ಸೆಕ್ಷನ್ ಜಾರಿ ಮಾಡಲು ತಿಳಿಸಿದೆ. ಹೀಗಾಗಿ ನಗರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆ ಬಿಟ್ಟು ಅನಗತ್ಯ ಓಡಾಟ ಮಾಡುವ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಒಂದು ವಾರಗಳ ಕಾಲ ಅನವಶ್ಯಕವಾಗಿ ಬೆಂಗಳೂರು ಕಡೆ ಯಾರೂ ಬರಬೇಡಿ, ಲಾಠಿ ರುಚಿ ಪ್ರಯೋಗ ಆಗುತ್ತೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂಜಾನೆ 5 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿಗೆ ಹೋಗುವವರಿಗೆ ಅವಕಾಶ ಇದ್ದು, ಬೇಕಾಬಿಟ್ಟಿ ಓಡಾಟ ಮಾಡುವಂತಿಲ್ಲ. ರಾತ್ರಿ 8 ಗಂಟೆಯೊಳಗಡೆ ಮನೆ ಮನೆಗೆ ಫುಡ್ ಡೆಲಿವರಿ ಮುಗಿಸಬೇಕು. ವಿಮಾನ ನಿಲ್ದಾಣ ಫ್ಲೈ ಓವರ್ ಬಿಟ್ಟು ನಗರದ ಎಲ್ಲಾ ಫ್ಲೈ ಓವರ್ ಬಂದ್ ಆಗಲಿದೆ. ಕೇಂದ್ರ ಸರ್ಕಾರದ ರೈಲು ಹಾಗೂ ವಿಮಾನ ಸಂಚಾರ ಇರುತ್ತದೆ. ಈ ವೇಳೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಇರೋದಿಲ್ಲ ಎಂದಿದ್ದಾರೆ.
ಕೊರೊನಾ ವಾರಿಯರ್ ಆಗಿ ಪೊಲೀಸರು ಕಾರ್ಯ ನಿರ್ವಹಣೆ ಮಾಡುವಾಗ ಕೆಲವರಿಗೆ ಸೋಂಕು ತಗುಲಿತ್ತು. ಹೀಗಾಗಿ ವಾಲೆಂಟಿಯರ್ಸ್ ಅನ್ನು ಪೊಲೀಸರನ್ನಾಗಿ ಕೆಲವು ಸಾರ್ವಜನಿಕರ ಸಹಾಯ ಪಡೆದಿದ್ದೇವೆ. ಟ್ರಾಫಿಕ್ ವಾರ್ಡನ್ ಆಗಿ ಕೆಲವರು ವಾಲೆಂಟಿಯರ್ಸ್ ಇದ್ದಾರೆ. ಅವರನ್ನೂ ಕೂಡ ಬಳಕೆ ಮಾಡಲಿದ್ದು, ಸದ್ಯ ಎರಡು ಮೂರು ಜನ ಸಿಬ್ಬಂದಿ ಐಸಿಯೂನಲ್ಲಿದ್ದಾರೆ. ಆದರೂ ಸದಾ ನಾವು ಜನರ ಸೇವೆಗೆ ಸಿದ್ಧವಿದ್ದು 24 ಗಂಟೆಯೂ ಪೊಲೀಸರ ಸೇವೆ ಇದ್ದು, ಕಠಿಣ ಸಂದರ್ಭದಲ್ಲಿ ಸಾರ್ವಜನಿಕರು ಸೇವೆ ಪಡೆಯಬಹುದು. ಸದ್ಯ ಸಿಬ್ಬಂದಿ ಕೊರತೆ ಇದೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ಮುಂಜಾಗ್ರತೆಯ ಕ್ರಮವನ್ನು ಕೈಗೊಂಡಿದ್ದೇವೆ. ಹೋಂಗಾರ್ಡ್ಗಳು ಕೂಡ ಕೆಲಸ ನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರಾತ್ರಿಯಿಂದಲೇ ರಸ್ತೆ ಸಂಪೂರ್ಣ ಬಂದ್:
ಸೋಮವಾರ ರಾತ್ರಿ 8 ಗಂಟೆಯಿಂದಲೇ ಸಂಪೂರ್ಣವಾಗಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಾತ್ರಿಯಿಂದಲೇ ಖಾಕಿ ಸಂಪೂರ್ಣವಾಗಿ ಅಲರ್ಟ್ ಇದ್ದು ಜನರ ಓಡಾಟ, ವಾಹನ ಸವಾರರ ಸಂಚಾರಕ್ಕೆ ಕಡಿವಾಣ ಹಾಕಲಿದ್ದಾರೆ.
ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ಹಳೆ ಮದ್ರಾಸ್ ರಸ್ತೆ ಮತ್ತು ಕನಕಪುರ ರಸ್ತೆ ಗ್ರಾಮಾಂತರ ಪೊಲೀಸರು ಹಾಗೂ ನಗರ ಪೊಲೀಸರು ಸಮನ್ವಯ ಆಧಾರದ ಮೇಲೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ನಗರದಿಂದ ಹೊರ ಹೊಗದಂತೆ ಹಾಗೆ ಜಿಲ್ಲೆಯಿಂದ ಒಳಗಡೆ ಬಾರದಂತೆ ನೋಡಿಕೊಳ್ಳಾಲಿದ್ದಾರೆ. ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರದ ಜನತೆ ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ನಿಗದಿಪಡಿಸಿದ ಅವಧಿಯಲ್ಲಿ ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ .
ದಂಡ, ಕೇಸ್ ಖಚಿತ:
ಲಾಕ್ಡೌನ್ ಒಂದರಲ್ಲಿ ಜಾರಿಯಾಗಿದ್ದ ಎಲ್ಲಾ ನಿಯಮ ಇಲ್ಲಿ ಅನ್ವಯವಾಗುತ್ತದೆ. ಇದು ಕಠಿಣವಾಗಿದ್ದು, ಅದರಲ್ಲೂ ಈ ಬಾರಿ ವಿನಾಕಾರಣ ಹೊರಗಡೆ ಓಡಾಟ, ಮಾಸ್ಕ್ ಧರಿಸದೆ ಇರುವುದು, ವಾಹನದಲ್ಲಿ ಓಡಾಟ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಒಲಾ, ಉಬರ್ ಸ್ಟೇಷನ್ ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಟ್ಯಾಕ್ಸಿ ಓಡಾಟ ಮಾಡಬಹುದು ಎಂದು ತಿಳಿಸಿದ್ದಾರೆ.
ಅನಿವಾರ್ಯ ಕಾರಣಕ್ಕೆ ಮಾತ್ರ ಓಡಾಟ ಮಾಡಿ:
ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ರಾಜ್ಯದ ಒಳಗೆ ಅಥವಾ ಹೊರಗೆ ಪ್ರಯಾಣ ಮಾಡೋದಿದ್ರೆ ಸೇವಾಸಿಂಧು ಪೋರ್ಟಲ್ ಮುಖಾಂತರ ಪಾಸ್ ಪಡೆಯಬೇಕು. ಹಾಗೆಯೇ ಅಗತ್ಯ ಸೇವೆ ಸಲ್ಲಿಸುವ ವೈದ್ಯರು, ನರ್ಸ್, ಪೊಲೀಸರು, ಸರ್ಕಾರಿ ನೌಕರರು ಹಾಗೆ ಜರ್ನಲಿಸ್ಟ್ಗಳು ಐಡಿ ತೋರಿಸಿ ಪೊಲೀಸರ ಕೆಲಸದ ಜೊತೆ ಕೈ ಜೋಡಿಸಿ ಎಂದಿದ್ದಾರೆ. ಒಂದು ವೇಳೆ ಐಡಿ ಕಾರ್ಡ್ ಇಲ್ಲದೇ ವಿನಾಕಾರಣ ಕಿರಿಕ್ ಮಾಡಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.