ಬೆಂಗಳೂರು: ಆನ್ಲೈನ್ ಚೀಟಿಂಗ್, ಒಟಿಪಿ ಚೀಟಿಂಗ್, ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳ ಹೀಗೆ ನಾನಾ ರೀತಿಯ ತೊಂದರೆಗೊಳಾದಾಗ ಜನ ಹೋಗೋದೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ. ಆದ್ರೆ ಇದೇ ಸೈಬರ್ ಕ್ರೈಂನಲ್ಲಿ ದೇಶದಲ್ಲೇ ಅತಿ ಹೆಚ್ಚು ದೂರು ಪಡೆದುಕೊಳ್ಳುತ್ತಿರುವ ನಗರ ಎಂಬ ಹಣೆಪಟ್ಟಿಯನ್ನು ಬೆಂಗಳೂರು ಪಡೆದುಕೊಂಡಿದೆ. ಇದಕ್ಕೆ ಕಾರಣ ಸಿಬ್ಬಂದಿ ಕೊರತೆ ಎನ್ನಲಾಗುತ್ತಿದೆ.
ದೇಶದ ಅಷ್ಟೂ ಮೆಟ್ರೋ ಸಿಟಿಗಳಲ್ಲಿ ನಮ್ಮ ಸಿಲಿಕಾನ್ ಸಿಟಿ ಕೂಡ ಒಂದು. ಇಲ್ಲಿ ಇರುವಂತೆ ಕೆಲ ಮೆಟ್ರೋ ಸಿಟಿಗಳಲ್ಲೂ ಆನ್ಲೈನ್ ವಂಚನೆ ದೂರುಗಳಿಗಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಇದೆ. ಆದರೆ ಸದ್ಯ 9 ಸಾವಿರ ಸಂಖ್ಯೆಯ ದೂರಿನ ಗಡಿ ದಾಟಿರುವ ಬೆಂಗಳೂರಿನ ಸೈಬರ್ ಕ್ರೈಂ, ಪ್ರಕರಣಗಳನ್ನು ಬೇಧಿಸಲು ಮಾಡಲು ಹರಸಾಹಸ ಪಡುತ್ತಿದೆ.
ಈ ಹಿಂದೆ ಡಿಜಿ ಹಾಗೂ ಐಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಸೈಬರ್ ಕ್ರೈಂನಲ್ಲಿ ಸಿಬ್ಬಂದಿ ಕೊರತೆಯಿದೆ. ದಯವಿಟ್ಟು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ಅಂತ ಸಿಐಡಿಯ ಹಿರಿಯ ಅಧಿಕಾರಿಗಳು ಪತ್ರದ ಮುಖೇನ ಮನವಿ ಮಾಡಿದ್ದರು. ಆದರೆ ಯಾವುದಕ್ಕೂ ಮೇಲಿನ ಹಿರಿಯ ಅಧಿಕಾರಿಗಳು ಸ್ಪಂದಿಸದಿರುವುದೇ ಇಂದು ಈ ಹಣೆಪಟ್ಟಿ ಬಂದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನು ಈ ಬಗ್ಗೆ ಈಗಿನ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈಟಿವಿ ಭಾರತ್ ಜೊತೆ ದೂರವಾಣಿ ಮೂಲಕ ಮಾತನಾಡಿ, ಈ ಹಿಂದೆಯೂ ಇದೇ ರೀತಿ ಮನವಿ ಕಳಿಸಿದ್ದರು. ಅದಕ್ಕೆ ಹಿರಿಯ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಲ್ಲದೆ ಈಗಲೂ ಒಂದು ಮನವಿ ಕಳುಹಿಸಿದ್ದೇವೆ. ಪತ್ರದ ಮುಖೇನ ಮನವಿ ಮಾಡಿದ್ದೇವೆ ಎಂದರು.
ಏಕೆಂದರೆ ಈಗ ಕಡಿಮೆ ಸಿಬ್ಬಂದಿ ಇದ್ದಾರೆ. ಕೆಲವೊಮ್ಮೆ ಹೊರ ದೇಶ ಅಥವಾ ರಾಜ್ಯಗಳ ವಂಚಕರನ್ನು ಹಿಡಿಯಬೇಕಾದರೆ ಸಿಬ್ಬಂದಿ ಕೂಡಾ ಅಲ್ಲಿಗೆ ಹೋಗಬೇಕು. ಸಿಬ್ಬಂದಿ ತೀರಾ ಕಡಿಮೆ ಇರುವುದರಿಂದ ಪ್ರಕರಣಗಳೂ ಕೂಡ ಇತ್ಯರ್ಥವಾಗ್ತಿಲ್ಲ. ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮನವಿ ಸಲ್ಲಿಸಿದ್ದೇವೆ. ಜಂಟಿ ಆಯುಕ್ತರು ಹೇಳುವಂತೆ ಕೆಲವೊಮ್ಮೆ ಎಲ್ಲೋ ಕೂತ ಫ್ರಾಡರ್ಸ್ಗಳನ್ನ ಹುಡುಕುವಾಗ ತೀರಾ ಕಷ್ಟವಾಗುತ್ತೆ. ಅಲ್ಲದೆ, ಈಗಿರುವ ಸಿಬ್ಬಂದಿ ಕೇವಲ 25 ಮಾತ್ರ. ಹೆಚ್ಚೆಚ್ಚು ಪ್ರಕರಣ ದಾಖಲಾಗುವುದರಿಂದ ಕೆಲಸದೊತ್ತಡ ಅಧಿಕವಾಗಿದೆ ಎಂದು ಬೇಸರದಿಂದ ಹೇಳುತ್ತಾರೆ ಸೈಬರ್ ಕ್ರೈಂನ ಸಿಬ್ಬಂದಿ.