ಬೆಂಗಳೂರು: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್.3ರಂದು ಜಿಕೆವಿಕೆ ಆವರಣದಲ್ಲಿ ನಡೆಯಲಿರುವ ಸಿನಿಮಾ ಹಬ್ಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಸರಳವಾಗಿ ನಡೆಯಲಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರ್ಧರಿಸಿದೆ. 13ನೇ ಸಿನಿಮೋತ್ಸವ ಅದ್ಧೂರಿಯಾಗಿ ಮಾಡಲು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಹಾಗೂ ತಂಡ ಸಜ್ಜಾಗಿದ್ದು, ಸುನೀಲ್ ಪುರಾಣಿಕ್ ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳ ಸಿನಿಮಾಗಳು ಪ್ರದರ್ಶನವಾಗಲಿದ್ದು, ಎರಡು ವರ್ಷದ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ವಿಶ್ವ ಮಾನ್ಯತೆ ಪಡೆದಿರುವ ಚಲನಚಿತ್ರೋತ್ಸವದಲ್ಲಿ 55 ರಾಷ್ಟಗಳ ಸುಮಾರು 200 ಸಿನಿಮಾಗಳು ಪ್ರದರ್ಶನವಾಗಲಿವೆ.
ಸಿನಿಮೋತ್ಸವದಲ್ಲಿ ಪ್ರಸಾರವಾಗುವ ಸಿನಿಮಾಗಳು ರಾಜಾಜಿನಗರ ಓರಾಯನ್ ಮಾಲ್ನಲ್ಲಿ 11 ಪರದೆಗಳಲ್ಲಿ ಹಾಗೂ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಪ್ರದರ್ಶನವಾಗಲಿವೆ. ಸಿನಿಮೋತ್ಸವದಲ್ಲಿ ಆನ್ಲೈನ್ ಹಾಗೂ ಚಿತ್ರಮಂದಿರಗಳಲ್ಲೂ ಸಿನಿಮಾ ವೀಕ್ಷೀಸುವ ಅವಕಾಶ ಇರಲಿದೆ.
ಚಲನಚಿತ್ರೋತ್ಸವದ ವಿಶೇಷತೆಗಳು: ಸಿನಿಮೋತ್ಸವದಲ್ಲಿ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನವಾಗಲಿವೆ.
ಜೊತೆಗೆ 70ರ ದಶಕದಲ್ಲಿ ಬೆಳ್ಳಿತೆರೆಯನ್ನು ಬೆಳಗಿಸಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಿನಿ ಜರ್ನಿಯ ಕುರಿತಂತೆ ಪುನರಾವಲೋಕನ ಆಗಲಿದೆ. ಇದಲ್ಲದೇ ತುಳು ಚಿತ್ರರಂಗಕ್ಕೂ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆ ಭಾಷೆಯ ಚಿತ್ರಗಳ ಪ್ರದರ್ಶನ ಹಾಗೂ ವಿಚಾರ ಸಂಕೀರ್ಣಗಳ ಮೂಲಕ ತುಳು ಚಿತ್ರರಂಗದ ಅವಲೋಕನಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
ಅಗಲಿದ ಚಿತ್ರ ತಾರೆಯರೆಯರಿಗೆ ನಮನ ಸಲ್ಲಿಕೆ: ಸಿನಿಮೋತ್ಸವದಲ್ಲಿ ನಿಮ್ಮನಗಲಿದ ಚಿತ್ರರಂಗದ ನಟ - ನಟಿಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರ ಜೊತೆಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಸಾಧನೆಯ ಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ವಿವಿಧ ರಾಜ್ಯದ ಪತ್ರಕರ್ತರು, ವಿಮರ್ಶಕರು ಭಾಗಿ: ಸಿನಿಮೋತ್ಸವದಲ್ಲಿ ಭಾರತದ ಚಲನಚಿತ್ರ ನಿರ್ಮಾಪಕರು, ಚಿತ್ರೋತ್ಸವದ ಸಂಘಟಕರು ಸೇರಿದಂತೆ ಪಶ್ಚಿಮ ಬಂಗಾಳ,ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಕೇರಳ,ತೆಲಂಗಾಣ, ತಮಿಳುನಾಡು ಹಾಗೂ ಈಶಾನ್ಯ ರಾಜ್ಯಗಳ ಪತ್ರಕರ್ತರು, ವಿಮರ್ಶಕರು ಭಾಗಿಯಾಗಲಿದ್ದಾರೆ.
ಪಾಸ್ಗಳ ವ್ಯವಸ್ಥೆ : ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಾಗೂ ಸಿನಿಮಾ ನೋಡಲು ಪಾಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ 800 ರೂ. ಹಾಗೂ ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜದ ಸದಸ್ಯರಿಗೆ 400 ರೂ. ದರ ನಿಗದಿ ಮಾಡಲಾಗಿದೆ. ಚಿತ್ರೋತ್ಸವದ ಪಾಸ್ಗಳು ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ಸಿಗಲಿವೆ.
ಇದನ್ನೂ ಓದಿ: ಹಿಜಾಬ್: ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೂರ್ಣಪೀಠದಲ್ಲಿ 4ನೇ ದಿನದ ವಿಚಾರಣೆ ಆರಂಭ