ಬೆಂಗಳೂರು: ಕೊರೊನ ಮಹಾಮಾರಿಯ ಕಾರಣ ಶೇ. 25-30 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆರ್ಥಿಕ ಸಂಕಷ್ಟದಿಂದ ಮುಚ್ಚುವ ಹಂತದಲ್ಲಿದೆ ಎಂದು ಕಾಸಿಯಾ ಸಂಘದ ಅಧ್ಯಕ್ಷ ರಾಜು ಹೇಳಿದರು.
ಆರ್ಥಿಕ ಪುನಶ್ಚೇತನ ಮಾಡುವುದಕ್ಕೆ ಕೈಗಾರಿಕೆಗಳಿಗೆ, ಸಾಮಾನ್ಯವಾಗಿ ನೀಡುವ ಬಡ್ಡಿ ದರದಲ್ಲಿ ಸಾಲ ನೀಡಿದರೆ, ಕೈಗಾರಿಕೆಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಡ್ಡಿ ದರ ಶೇ 4 ರಂತೆ ಕೈಗಾರಿಕೆಗಳಿಗೆ ನೀಡಬೇಕು ಎಂದು ರಾಜು ಸರ್ಕಾರಕ್ಕೆ ಒತ್ತಾಯಿಸಿದರು.
ಕ್ರಿಸಲ್ ರೇಟಿಂಗ್ ಆದಾರದ ಮೇಲೆ, ಕೈಗಾರಿಕೆಗಳಿಗೆ ಸಾಲವನ್ನು ಬ್ಯಾಂಕ್ ನೀಡುತ್ತಿದೆ. ಕ್ರಿಸಲ್ ರೇಟಿಂಗ್ ಉತ್ತಮ ಇರುವವರಿಗೆ ಸಾಲದ ಅವಶ್ಯಕತೆ ಇರುವುದಿಲ್ಲ. ಆದರೆ, ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಪ್ರಸ್ತುತವಾಗಿ ಸಾಲದ ಅವಶ್ಯಕತೆ ಹೆಚ್ಚಿದೆ. ಎಸ್ಎಂಇ 1 ಅಥವಾ ಎಸ್ಎಂಇ 0 ಇದ್ದರೆ ಮಾತ್ರ ಬ್ಯಾಂಕ್ ಸಾಲವನ್ನು ಕೈಗಾರಿಕೆಗಳಿಗೆ ನೀಡುತ್ತಿದೆ. ಹೀಗಾದರೆ ಸಂಕಷ್ಟದಲ್ಲಿರುವ ಕೈಗಾರಿಕೆಗಳು ಪುನಶ್ಚೇತನ ಆಗುವುದು ಅಸಾಧ್ಯ.
ಬೆಂಗಳೂರು ನಗರದಲ್ಲಿ 4.5 ಲಕ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪೀಣ್ಯಾ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಬೊಮ್ಮಸಂದ್ರ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ಜಿಗಣಿ ಸೇರಿದಂತೆ ಹಲವು ಕಡೆ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಈ ನಾಲ್ಕೂವರೆ ಲಕ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಒಂದು ಕೋಟಿ ಕುಟುಂಬಗಳು ಅವಲಂಬಿತವಾಗಿವೆ. ಹೀಗೆ ಆರ್ಥಿಕ ಬಿಕ್ಕಟ್ಟು ಕೈಗಾರಿಕೆಗಳಿಗೆ ಮುಂದುವರಿದರೆ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುವ ಆತಂಕದಲ್ಲಿವೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ವರ್ಕಿಂಗ್ ಬಂಡವಾಳ ಪಡೆಯುವುದನ್ನು ಸುಲಭಗೊಳಿಸಿದೆ. ಆದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ ಇನ್ನೂ ಹೆಚ್ಚಿನ ಕ್ರಮಗಳು ಕೈಗೊಳ್ಳಬೇಕಾಗಿದೆ ಎಂದು ಕೈಗಾರಿಕೆ ತಜ್ಞರು ಹಾಗೂ ಮಾಲೀಕರ ಅಭಿಪ್ರಾಯವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗೂ ಸರ್ಕಾರ ಕೈಗಾರಿಕೆಗಳಿಗೆ ನೇರವಾಗಿ ಆರ್ಥಿಕ ಸಹಾಯದ ರೀತಿ ಇನ್ನು ಹೆಚ್ಚಿನ ಸಹಾಯ ಮಾಡಬೇಕಿದೆ ಎಂದು ಉದ್ಯಮಿಗಳು ಮನವಿ ಮಾಡಿದ್ದಾರೆ.