ಬೆಂಗಳೂರು: ಕಳೆದ ಐದು ತಿಂಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ಧ ಜುಗ್ಗುರಾಜ್ ಕೊಲೆ ಪ್ರಕರಣದ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ ಚಾಮರಾಜಪೇಟೆ ಪೊಲೀಸರು, ಹತ್ಯೆಗೆ ಕಾರಣ ಇದರ ಹಿಂದಿರುವ ಮಾಸ್ಟರ್ ಪ್ಲಾನ್ ಹಾಗೂ ಪೊಲೀಸರಿಂದ ಆರೋಪಿಗಳು ಕಣ್ತಪ್ಪಿಸಿ ಮರೆಯಾಗಲು ಹೇಗೆಲ್ಲಾ ಸಂಚು ರೂಪಿಸಿದ್ದರು ಎಂಬ ಸತ್ಯವನ್ನ ಆರೋಪ ಪಟ್ಟಿಯಲ್ಲಿ ಅನಾವರಣಗೊಳಿಸಿದ್ದಾರೆ.
ಪೊಲೀಸರು 22ನೇ ಎಸಿಎಂಎಂ ನ್ಯಾಯಾಲಯಕ್ಕೆ ಐವರು ಆರೋಪಿಗಳ ವಿರುದ್ಧ 345 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ ಮೇ 25 ರಂದು ಹತ್ಯೆಗೊಳಗಾದ ವೃದ್ಧ ಜುಗ್ಗುರಾಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ತಾನ ಮೂಲದ ಬಿಜೋರಾಮ ಸಹಚರರಾದ ಮಹೇಂದ್ರರ್ ದೇವಸಿ, ಓಂಪ್ರಕಾಶ್, ಓಂರಾಮ್ ಹಾಗೂ ಪೂರಮ್ ರಾಮ್ ಹತ್ಯೆಗೆ ರೂಪಿಸಿದ್ದ ಸಂಚು, ಕೊಲೆ ಬಳಿಕ ಕಳ್ಳತನ ಮಾಡಿದ್ದ 10.3 ಕೆ.ಜಿ ಚಿನ್ನಾಭರಣ ಹಾಗೂ 60 ಲಕ್ಷ ನಗದು ಹೇಗೆ ಹಂಚಿಕೊಂಡಿದ್ದರು ಎಂಬ ಸತ್ಯವನ್ನ ಚಾಮರಾಜಪೇಟೆ ಪೊಲೀಸರು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದ್ದು, ಇದರ ಪ್ರತಿ 'ಈಟಿವಿ ಭಾರತ್' ಕ್ಕೆ ಲಭ್ಯವಾಗಿದೆ.
(ಓದಿ: ಚಾಮರಾಜಪೇಟೆಯಲ್ಲಿ ಕೊಲೆ : ಹಣಕ್ಕಾಗಿ ಮನೆ ಮಾಲೀಕನನ್ನು ಮರ್ಡರ್ ಮಾಡಿದ್ನಾ ಕೆಲಸಗಾರ?)
5 ಲಕ್ಷ ತರದಿದ್ದರೆ ಮನೆಗೆ ಬರಬೇಡ: ದೀಪಂ ಎಲೆಕ್ಟ್ರಿಕಲ್ ಮಾಲೀಕನಾಗಿದ್ದ ಹತ್ಯೆಗೊಳಗಾದ ಜುಗ್ಗುರಾಜ್ ಬಳಿ ಆರೋಪಿ ಬಿಜೋರಾಮ್ 9 ತಿಂಗಳಿಂದ ಕೆಲಸ ಮಾಡುತ್ತಿದ್ದ. ತಿಂಗಳಿಗೆ 16 ಸಾವಿರ ರೂ. ವೇತನ ಪಡೆಯುತ್ತಿದ್ದ. 2021ರಲ್ಲಿ ಮದುವೆಯಾಗಿದ್ದ ಈತ, ಪತ್ನಿ ಗರ್ಭಿಣಿಯಾಗಿ ಏಳು ತಿಂಗಳು ಆಗಿರುವಾಗಲೇ ಗಂಡು ಮಗು ಜನಿಸಿದ್ದರಿಂದ ಮಗುವಿನ ಆರೋಗ್ಯ ಹದೆಗೆಟ್ಟಿತ್ತು. ಕಾಲಕ್ರಮೇಣ ಎಲ್ಲಾ ಸರಿಯಾದ ಮೇಲೆ ಬರುವ ಸಂಬಳದಲ್ಲಿ ತಿಂಗಳಿಗೊಮ್ಮೆ ಎರಡು-ಮೂರು ಸಾವಿರ ಉಳಿಸಿ ಪತ್ನಿಗೆ ಕಳುಹಿಸುತ್ತಿದ್ದ. ಇದಕ್ಕೆ ಅಸಮಾಧಾನಗೊಂಡಿದ್ದ ಪತ್ನಿ 'ನೀನು ಕೊಡುವ ಹಣ ಯಾವುದಕ್ಕೂ ಸಾಲುವುದಿಲ್ಲ. ಮನೆಗೆ ಬರುವುದಿದ್ದರೆ 5 ಲಕ್ಷ ತೆಗೆದುಕೊಂಡು ಬಾ' ಎಂದು ಕಡ್ಡಿ ಮುರಿದಂತೆ ಹೇಳಿದ್ದಳಂತೆ.
ಇದನ್ನೂ ಓದಿ: ಕೊಲೆ ಮಾಡಿದ್ದು ಬೆಂಗಳೂರಿನಲ್ಲಿ ಸೆರೆಯಾಗಿದ್ದು ಗುಜರಾತ್ ನಲ್ಲಿ
ಪತ್ನಿಯ ಮಾತಿನಂತೆ ಮಾಲೀಕ ಜುಗ್ಗುರಾಜ್ನ ಪುತ್ರ ಆನಂದ್ ಹಾಗೂ ಸೊಸೆ ಉಷಾ ಬಳಿ 5 ಲಕ್ಷ ಹಣ ಸಾಲ ನೀಡುವಂತೆ ಬಿಜೋರಾಮ್ ಕೇಳಿದ್ದ. ಆದ್ರೆ ಅವರು ಕೊಟ್ಟಿರಲಿಲ್ಲ. ಸ್ನೇಹಿತನಾಗಿದ್ದ ಪ್ರಕರಣದ ನಾಲ್ಕನೇ ಅರೋಪಿ ಆಭರಣ ವ್ಯಾಪಾರಿ ಮಹೇಂದ್ರರ್ ದೇವಸಿಗೆ ಕರೆ ಮಾಡಿ ಅಲವತ್ತುಕೊಂಡಿದ್ದ. ಕೆಲಸ ಮಾಡುತ್ತಿರುವ ಮಾಲೀಕರ ಶ್ರೀಮಂತಿಕೆ ವಿವರ ತಿಳಿದುಕೊಂಡ ಆತ, ಯಾರು ಇಲ್ಲದಿರುವಾಗ ಚಿನ್ನಾಭರಣ ಕಳ್ಳತನ ಮಾಡುವ ಐಡಿಯಾ ಕೊಟ್ಟಿದ್ದ. ಎಷ್ಟು ಬೇಕಾದರೂ ಚಿನ್ನ ಕಳ್ಳತನ ಮಾಡಿಕೊಂಡು ಬಾ ಅದನ್ನ ಮಾರಾಟ ಮಾಡುವ ಜವಾಬ್ದಾರಿ ನನ್ನದು ಎಂದು ಬಿಜೋರಾಮ್ಗೆ ಪುಸಲಾಯಿಸಿದ್ದ. ಇದರಂತೆ ಬಿಜೋರಾಮ್ ಕಳ್ಳತನ ಮಾಡಲು ನಿರ್ಧರಿಸಿದ್ದ.
ಮಾಲೀಕರ ಚಲನವಲನ ಅರಿತಿದ್ದ ಬಿಜೋರಾಮ್, ಕಳ್ಳತನ ಮಾಡಲು ತನ್ನೊಬ್ಬನಿಂದ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಂಡಿದ್ದ. ಮಹೇಂದರ್ ದೇವಸಿಗೆ ಕರೆ ಮಾಡಿ ಯಾರಾದರೂ ಹುಡುಗರನ್ನು ಕಳುಹಿಸು ಎಂದಿದ್ದ. ಇದರಂತೆ ಗೋವಾದಲ್ಲಿ ಪರಿಚಯಸ್ಥರಾಗಿದ್ದ ಓಂ ರಾಮ್, ಪೂನಮ್ ರಾಮ್ ಕರೆ ಮಾಡಿ ಕಳ್ಳತನ ಸಂಚಿನ ಬಗ್ಗೆ ವಿವರಿಸಿದ್ದ. ಕೃತ್ಯವೆಸಗಿದರೆ ಸುಲಭವಾಗಿ ಹಣ ಸಂಪಾದಿಬಹುದು ಎಂಬ ಆಸೆ ತೋರಿಸಿದ್ದ. ಇದರಂತೆ ಮೇ 24 ರಂದು ರಾತ್ರಿ ಆರೋಪಿಗಳು ಬೆಂಗಳೂರಿಗೆ ಬಂದಿದ್ದರು. ಇದಕ್ಕೆ ಮಹೇಂದರ್ ಸಹೋದರ ಓಂಪ್ರಕಾಶ್ ಸಾಥ್ ಕೊಟ್ಟಿದ್ದ.
ಇದನ್ನೂ ಓದಿ: 70 ವರ್ಷದ ವೃದ್ಧನ ಕತ್ತು ಕೊಯ್ದು ಕೊಲೆ! ನಾಲ್ವರಿಂದ ಕೃತ್ಯ ಶಂಕೆ!
ಮಾಲೀಕನ ಕೈ-ಕಾಲು ಬಿಗಿಯಲು ಪ್ಲಾಸ್ಟಿಕ್ ದಾರ ಖರೀದಿ: ಪೂರ್ವ ಸಂಚಿನಂತೆ ಕಳ್ಳತನ ಮಾಡಲು ನಿರ್ಧರಿಸಿದ್ದ ಆರೋಪಿಗಳು ಮೇ 24 ರಂದು ಮನೆಯವರು ಕೆಲಸದ ಸಲುವಾಗಿ ಹೊರ ಹೋಗಿದ್ದರು. ಇದನ್ನು ಗಮನಿಸಿದ್ದ ಬಿಜೋರಾಮ್ ಅಂದೇ ಸಹಚರರಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದ. ಅದೇ ದಿನ ಬೆಳಗ್ಗೆ ಜುಗ್ಗುರಾಜ್ ಚಿಕ್ಕಪೇಟೆಗೆ ಕೆಲಸದ ಸಲುವಾಗಿ ಬೈಕ್ನಲ್ಲಿ ಬಿಜೋರಾಮ್ನನ್ನು ಕರೆದೊಯ್ದಿದ್ದ. ಸಂಜೆ ಮನೆಗೆ ಬರುವಾಗ ಪ್ಲಾಸ್ಟಿಕ್ ದಾರ ಖರೀದಿಸಿ ಜೇಬಿಗಿಳಿಸಿಕೊಂಡಿದ್ದ. ರಾತ್ರಿ 10.30ರ ವೇಳೆ ಮನೆಯ ಪಾರ್ಕಿಂಗ್ನಲ್ಲಿ ವಾಸವಾಗಿದ್ದ ಅರೋಪಿಯು ವೃದ್ಧನನ್ನ ಹೊರತುಪಡಿಸಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದ. ಅಲ್ಲದೇ, ಮನೆ ಹೊರಗೆ ಸೆಕ್ಯೂರಿಟಿ ಗಾರ್ಡ್ ನಿದ್ರಿಸುವುದನ್ನ ಗಮನಿಸಿದ್ದ.
ಬಿಜೋರಾಮ್ ತನ್ನ ಬಟ್ಟೆ ಐರನ್ ಮಾಡುವಾಗ ಬಾಗಿಲು ಹಾಕಿಕೊಳ್ಳಲು ಬಂದ ಜುಗ್ಗುರಾಜ್ನನ್ನ ಕಂಡು ಇದೇ ಸರಿಯಾದ ಸಮಯ ಎಂದು ಭಾವಿಸಿ ಅಲ್ಲೇ ತೆಗೆದಿರಿಸಿಕೊಂಡಿದ್ದ ಬಟ್ಟೆ ತೆಗೆದುಕೊಂಡು ಅಡುಗೆ ಮನೆಗೆ ಹೋಗಿ ಖಾರದಪುಡಿ ತೆಗೆದುಕೊಂಡಿದ್ದ. ಲಾಕ್ ಮಾಡಿಕೊಂಡು ಹಾಲ್ ನತ್ತ ಬಂದಿದ್ದ ಮಾಲೀಕನ ಮೇಲೆ ಖಾರದ ಪುಡಿ ಎರಚಿ ಆತನನ್ನ ಬಿಳಿಸಿ ಕಿರುಚಾಡದಂತೆ ಕುತ್ತಿಗೆ ಹಿಡಿದು ಎಳೆದೊಯ್ದು ಪ್ಲಾಸ್ಟಿಕ್ ದಾರದಿಂದ ಕಟ್ಟಿ ಹತ್ಯೆ ಮಾಡಿದ್ದ. ನಂತರ ಲಾಕರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಚಿನ್ನಾಭರಣಗಳನ್ನು ಮೂರು ಬ್ಯಾಗ್ನಲ್ಲಿ ಹಾಕಿಕೊಂಡಿದ್ದ.
ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲೇ ಪತ್ನಿಯ ಕತ್ತು ಸೀಳಿದ ವೃದ್ಧ: 50 ವರ್ಷಗಳ ಸಂಸಾರ ದುರಂತ ಅಂತ್ಯ!
ಕೃತ್ಯವೆಸಗಿದ ಬಳಿಕ ಪೂರ್ವಸಂಚಿನಂತೆ ಓಂಪ್ರಕಾಶ್, ಓಂರಾಮ್ ಮನೆಯ ಹಿಂಬದಿ ಕಾಂಪೌಂಡ್ನಿಂದ ಬಟ್ಟೆ ಹಾಗೂ ಚಿನ್ನಾಭರಣವಿರುವ ಒಟ್ಟು ನಾಲ್ಕು ಬ್ಯಾಗ್ಗಳ ಸಮೇತ ಕಾಲ್ಕಿತ್ತಿದ್ದರು. ಪೊಲೀಸರಿಗೆ ಅನುಮಾನ ಬರದಿರಲು ಮಹೇಂದರ್ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ.
ಗೋವಾಗೆ ತೆರಳುವ ಮಾರ್ಗದಲ್ಲಿ ಸಿಮ್, ಮೊಬೈಲ್, ಬಟ್ಟೆ ಎಸೆದ ಖದೀಮರು: ಕೃತ್ಯವೆಸಗಿದ ನಂತರ ಆಟೋ ಹಿಡಿದು ಕಾಟನ್ಪೇಟೆಗೆ ಬಂದು ಅಲ್ಲಿಂದ ಚಿತ್ರದುರ್ಗದ ಬಸ್ ಹತ್ತಿದ್ದಾರೆ. ನಂತರ ಅಲ್ಲಿಂದ ಹುಬ್ಬಳ್ಳಿಗೆ ಕ್ಯಾಬ್ ಮಾಡಿಕೊಂಡು ಹೋಗಿದ್ದಾರೆ. ಹುಬ್ಬಳ್ಳಿಯಿಂದ ಗೋವಾ ರೈಲು ಹತ್ತಿದ್ದಾರೆ. ಮಾರನೇ ದಿನ ಬೆಳಗ್ಗೆ ಜುಗ್ಗುರಾಜ್ ಕೊಲೆ ಸಂಬಂಧ ಮಾಧ್ಯಮಗಳಲ್ಲಿ ಬಿಜೋರಾಮ್ ಫೋಟೋ ಸಹಿತ ಸುದ್ದಿ ಪ್ರಸಾರವಾಗಿತ್ತು.
ಬಿಜೋರಾಮ್ಗೆ ಮುಖ ಕಾಣಿಸಿದಂತೆ ಎಚ್ಚರವಹಿಸು. ಮೊಬೈಲ್ ಸಹ ಉಪಯೋಗಿಸಬೇಡ ಎಂದು ಪೂರನ್ ರಾಮ್ ಕರೆ ಮಾಡಿದ್ದ. ಆತಂಕಗೊಂಡು ಆರೋಪಿಗಳು ಮಾರ್ಗ ಮಧ್ಯೆ ಮೊಬೈಲ್, ಸಿಮ್ ಹಾಗೂ ಬಟ್ಟೆ ಬ್ಯಾಗ್ ಬಿಸಾಕಿದ್ದರು. ಗೋವಾದಲ್ಲಿ ಪೂರನ್ ಮನೆಗೆ ಹೋಗಿ ಕದ್ದಿದ್ದ 55 ಲಕ್ಷ ನಗದು ಹಾಗೂ ಚಿನ್ನಾಭರಣ ಪೈಕಿ 10 ಲಕ್ಷ ನಗದು, ಒಂದಿಷ್ಟು ಚಿನ್ನವನ್ನ ಬಿಜೋರಾಮ್ ಕೊಟ್ಟು ತಪ್ಪಿಸಿಕೊಳ್ಳುವಂತೆ ಸೂಚಿಸಿದ್ದ. ಸಹ ಆರೋಪಿಗಳು ಹಣ ಹಾಗೂ ನಗದು ಹಂಚಿಕೊಂಡು ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.