ಬೆಂಗಳೂರು: ಸಮಾಜ ವಿರೋಧಿ ಚಟುವಟಿಕೆ ಆರೋಪ ಮೇರೆಗೆ ಪಿಎಫ್ಐ ನಾಯಕರ ಹಾಗೂ ಕಚೇರಿಗಳ ಮೇಲೆ ಎನ್ಐಎ ದಾಳಿಸಿ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೆ ನಗರ ಪೊಲೀಸರು ರಾಜ್ಯದೆಲ್ಲೆಡೆ 17 ಕಡೆಗಳಲ್ಲಿ ದಾಳಿ ನಡೆಸಿ ಬೆಂಗಳೂರಿನಲ್ಲಿ ಇಬ್ಬರು ಸೇರಿ 15 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಫ್ಐ ಸಂಘಟನೆಯು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೇ ಆಧಾರದ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೂರ್ವ ವಿಭಾಗ ಹಾಗೂ ಸಿಸಿಬಿಯು ಮನ್ಸೂರ್ ಹಾಗೂ ಯಾಸೀನ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿದೆ. ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಕಲಬುರಗಿ ಸೇರಿದಂತೆ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದುಕೊಂಡ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 B ಒಳಸಂಚು, 121 -ರಾಷ್ಟ್ರದ ವಿರುದ್ದ ಸಮರ, 121 a ರಾಷ್ಟ್ರದ ವಿರುದ್ದ ಸಮರ ಸಾರಲು ಒಳಸಂಚು ಹಾಗೂ 153 a, ಕೋಮುಗಳ ನಡುವೆ ದ್ವೇಷ ಉಂಟುಮಾಡುವ ಸೆಕ್ಷನ್‌ನಡಿ ಪ್ರಕರಣ ದಾಖಲಾಗಿದೆ. ಕೆ.ಜಿ.ಹಳ್ಳಿ ಠಾಣೆಯಲ್ಲಿ ಪಿಎಫ್ಐ ವಿರುದ್ದ ಪ್ರಕರಣ ಸಂಬಂಧ 19 ಜನ ಅರೋಪಿಗಳ ಪಟ್ಟಿ ಮಾಡಲಾಗಿತ್ತು. ಆರೋಪಿಗಳೆಲ್ಲರೂ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಡಿಸಿಪಿಗಳಾದ ಭೀಮಾಶಂಕರ ಗುಳೇದ್ ಮತ್ತು ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 19 ಮಂದಿ ಆರೋಪಿಗಳ ಪೈಕಿ ಈವರೆಗೂ 15 ಜನರನ್ನು ವಶಕ್ಕೆ ಪಡೆಯಲಾಗಿದೆ.
ಎಎನ್ಐ ದಾಳಿ ಸಂಬಂಧ ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಬೆಂಗಳೂರಿನ ಡಿಜೆಹಳ್ಳಿ ಠಾಣೆಯ ಕೇಸ್ನಲ್ಲಿ ಬೇಕಾದ ಆರೋಪಿ ಮನೆಗಳ ಮೇಲೆ ದಾಳಿ ಮಾಡಲಾಯಿತು. ದಾಳಿ ಮಾಡಿ ಪ್ರಮುಖವಾದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆಲವರನ್ನು ಅರೆಸ್ಟ್ ಮಾಡಲಾಗಿದೆ ಮುಂದೆ ಬೆಂಗಳೂರು ನಗರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಲಾಗುವುದು.
ಎನ್ಐಎ ಮಾಹಿತಿ ಆಧರಿಸಿ ಜಂಟಿಯಾಗಿ ಕಾರ್ಯಾಚರಣೆ ಮಾಡಲಾಗಿದೆ. ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಉತ್ತರ ಕನ್ನಡದಲ್ಲಿ ಕೇವಲ ರಾಜ್ಯ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರು, ಕಲಬುರ್ಗಿ, ಬೆಂಗಳೂರಿನಲ್ಲಿ ಮಾತ್ರ ಎನ್ಐಎ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸೀಜ್ ಮಾಡಿರುವ ವಸ್ತುಗಳು ಸೇರಿ ಎಲ್ಲಾ ಬಂಧಿತರನ್ನು ಡಿಜೆ ಹಳ್ಳಿ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು