ಬೆಂಗಳೂರು: ಕೆಮಿಕಲ್ ಗೋಡೌನ್ಗೆ ಬಿದ್ದ ಬೆಂಕಿ ಇನ್ನೂ ಆರಿಲ್ಲ. ಅಗ್ನಿಯ ನರ್ತನಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲು ಆಗಿದ್ದು, ಕೂದಲೆಳೆ ಅಂತರದಲ್ಲಿ ಗೋದಾಮಿನಲ್ಲಿದ್ದ ಸಿಬ್ಬಂದಿ ಪಾರಾದ್ರೆ, ರಾತ್ರಿ ಮುಂಜಾಗ್ರತಾ ಕ್ರಮವಾಗಿ ದಿನದಮಟ್ಟಿಗೆ ಕೆಮಿಕಲ್ ಗೊಡೌನ್ ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
ಸ್ಯಾನಿಟೈಸರ್ ತಯಾರಿಕೆಗೆ ಬಳಸುವ ಕೆಮಿಕಲ್ ಸಂಗ್ರಹಿಸಿದ್ದ ಗೋಡೌನ್ನಲ್ಲಿ ನಿನ್ನೆ ಬೆಳಗ್ಗೆ ಸುಮಾರು 11ಗಂಟೆಗೆ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ನಗರದ ಹೊಸಗುಡ್ಡದಹಳ್ಳಿಯ ಎ ಸ್ಟ್ರೀಟ್ನಲ್ಲಿರುವ ಕಮಲಾ ಹಾಗೂ ಸಜ್ಜನ್ ರಾಜ್ ಎಂಬುವರಿಗೆ ಸೇರಿದ ಕೆಮಿಕಲ್ ಗೋಡೌನ್ನಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ.
ನೋಡ ನೋಡುತ್ತಿದ್ದಂತೆ ದಟ್ಟ ಹೊಗೆಯ ಜೊತೆಗೆ ಕಟ್ಟಡಗಳ ನಡುವೆ ಭುಗಿಲೆದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಬೆಳಗ್ಗೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಯ ನರ್ತನ ರಾತ್ರಿ ಎರಡು ಗಂಟೆ ವೇಳೆಗೆ ಕೊಂಚ ತಹಬದಿಗೆ ಬಂದಿತ್ತು. ಆದ್ರೂ ಸಂಪೂರ್ಣವಾಗಿ ಬೆಂಕಿ ನಂದಿಸಲಾಗದ ಹಿನ್ನೆಲೆ ಇಲ್ಲಿನ ಜನರನ್ನು ದಿನದ ಮಟ್ಟಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯ್ತು. ನೀರು ಸಿಂಪಡಣೆ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳುತ್ತಾರೆ.
ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಇದೆ. ಆದರೆ, ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆದಿರಲಿಲ್ಲ. ಉಮಾ ಟಾಕೀಸ್ ಬಳಿಯ ಗೋದಾಮಿನಿಂದ ಕೆಮಿಕಲ್ ತುಂಬಿದ್ದ ಸುಮಾರು 1,800 ಬ್ಯಾರಲ್ಗಳಲ್ಲಿ ಸ್ಯಾನಿಟೈಸರ್ ತಯಾರಿಕಾ ಕೆಮಿಕಲ್ ಸಂಗ್ರಹಿಸಿಡಲಾಗಿತ್ತು ಎನ್ನಲಾಗ್ತಿದೆ.
ಜನವಸತಿ ಪ್ರದೇಶದಲ್ಲಿದ್ದ ಗೋಡೌನ್ನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೂ ಆವರಿಸಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಕೆಮಿಕಲ್, ಗೋಡೌನ್ ಸುತ್ತಮುತ್ತಲಿನ ಮನೆಗಳ ನಿವಾಸಿಗರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.
ಕೆಮಿಕಲ್ ಗೋಡೌನ್ಗೆ ಬಿದ್ದ ಬೆಂಕಿ ಪಕ್ಕದ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಗೂ ಆವರಿಸಿತ್ತು. ಪರಿಣಾಮ ಸುಮಾರು 45 ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಪ್ಲಾಸ್ಟಿಕ್ ಕಾರ್ಖಾನೆ ಮಾಲೀಕ ಅಯಾಜ್ ಪಾಷಾ ಅಳಲು ತೋಡಿಕೊಂಡಿದ್ದಾರೆ.
ಕೆಮಿಕಲ್ ಗೋಡೌನ್ ಮಾಲೀಕರಾದ ಕಮಲಾ ಹಾಗೂ ಸಜ್ಜನ್ ರಾಜ್ ಎಂಬುವರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.