ಬೆಂಗಳೂರು: ಕಳೆದ ಒಂದು ವರ್ಷದಿಂದ ಉತ್ತಮ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು 15 ಕೆ.ಜಿ ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸ್ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣ ಮಾದಕ ವಸ್ತು ಪತ್ತೆಹಚ್ಚಿರುವುದು ಶ್ಲಾಘನೀಯ ಎಂದು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಕ ಜಾಲ ಪತ್ತೆಗೆ ಬಲೆ ಬೀಸಿರುವ ಸಿಸಿಬಿ ಪೊಲೀಸರು ಒಟ್ಟು 6 ಕೋಟಿ ರೂ ಮೌಲ್ಯದ, 15 ಕೆಜಿ ಹ್ಯಾಶಿಶ್ ಆಯಿಲ್, 11 ಕೆಜಿ ಗಾಂಜಾ, 530 ಗ್ರಾಂ ಚರಸ್ ಉಂಡೆ, 4 ಹೈಡ್ರೊ ಗಾಂಜಾ ಸಸಿಗಳು ಜಪ್ತಿ ಮಾಡಿದ್ದಾರೆ ಎಂದು ಸಿಸಿಬಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ನಬರಮ್ ಚೆಕ್ಮಾ, ರೋಲ್ಯಾಂಡ್ ರೋಜರ್, ತರುಣ್, ಮೆಬಿನ್ ಬಾಬು ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಚೆಕ್ಮಾ ಅಸ್ಸೋಂ ಮೂಲದವನಾಗಿದ್ದಾನೆ. ಹೆಣ್ಣೂರಿನ ಗೆದ್ದಲಹಳ್ಳಿ ಬಳಿ ಮನೆ ಮಾಡಿಕೊಂಡಿದ್ದ ಆರೋಪಿಗಳು, ಮನೆಯಲ್ಲೇ ಹೈಡ್ರೋ ಗಾಂಜಾ ಗಿಡ ಬೆಳೆಸಿದ್ದರು. ಇಂಟಿರಿಯರ್ನಲ್ಲಿ ಗಿಡ ಬೆಳೆಸಲು ಸನ್ ಲೈಟ್ ಬಳಸುತ್ತಿದ್ದರು. ಅಲ್ಟ್ರಾ ಲೈಟ್ ಮೂಲಕ ಸನ್ ಲೈಟ್ ವ್ಯವಸ್ಥೆ ಮಾಡಿದ್ದರು ಎಂದರು.
ಆಂಧ್ರದಲ್ಲಿ ಗಾಂಜಾ ಬಟ್ಟಿ ಇಳಿಸಿ ಹ್ಯಾಶಿಶ್ ಆಯಿಲ್ ತಯಾರಿಕೆ ಮಾಡಲಾಗುತ್ತಿತ್ತು. ಡಾಗ್ ಬ್ರೀಡರ್ ಮೂಲಕ ಗಣ್ಯ ವ್ಯಕ್ತಿಗಳಿಗೆ ಗಾಂಜಾ ಮತ್ತು ಹ್ಯಾಶಿಸ್ ಆಯಿಲ್ ಮಾರಾಟ ಮಾಡಲಾಗುತ್ತಿತ್ತು. ಪ್ರತಿಷ್ಠಿತ ವ್ಯಕ್ತಿಗಳನ್ನ ಸಂಪರ್ಕಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹ ಮಾಡಿದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮೂರು ಗಿಡಗಳ ಸಮೇತ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೊಂದು ಪ್ರಕರಣದಲ್ಲಿ ಅನಧಿಕೃತವಾಗಿ ನಗರದಲ್ಲಿ ನೆಲೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯಾದ ಒನ್ಯೆಕಾ ಇಮ್ಮಾನುಎಲ್ ಜೇಮ್ಸ್ ಎಂಬುವನನ್ನು ವಶಕ್ಕೆ ಪಡೆದು, ಸುಮಾರು 5 ಲಕ್ಷ ರೂ. ಬೆಲೆ ಬಾಳುವ 25 ಎಂಡಿಎಂಎ ಎಕ್ಸ್‌ಟೆಸಿ ಪಿಲ್ಸ್ ಮತ್ತು 13 ಎಲ್‌ಎಸ್‌ಡಿ ಸ್ಪೀಟ್ಸ, ಮೊಬೈಲ್ ಫೋನ್ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.