ಬೆಂಗಳೂರು: ಮೊದಲ ಸಲ ಪರೀಕ್ಷೆ ಬರೆದು ಸೋಲು ಕಂಡರೂ ಪ್ರಯತ್ನ ಬಿಡದೇ ಎರಡನೇ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದು 77ನೇ ರ‍್ಯಾಂಕ್ ಪಡೆದಿದ್ದಾರೆ ಬೆಂಗಳೂರಿನ ಅಕ್ಷಯ್ ಸಿಂಹ ಕೆ.ಜೆ.
ದೇಶದ ಅತ್ಯುನ್ನತ ಹುದ್ದೆಗಳಾದ ಐಎಎಸ್, ಐಎಫ್ಎಸ್, ಐಪಿಎಸ್, ಐಆರ್ಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದ ಹಲವು ಅಭ್ಯರ್ಥಿಗಳು ಉತ್ತಮ ಸ್ಥಾನ ಪಡೆದಿದ್ದಾರೆ. ಪಿ.ಶ್ರೀಜಾ 20ನೇ ರ‍್ಯಾಂಕ್, ಯಶವಂತ್ 93ನೇ ರ‍್ಯಾಂಕ್ ರಿಷಬ್ 104 ಹಾಗೂ ಲಕ್ಷ್ಮಿ ಸೌಜನ್ಯ 127ನೇ ರ‍್ಯಾಂಕ್ ಹೀಗೆ ಸಾಕಷ್ಟು ಜನ ಉತ್ತಮ ರ‍್ಯಾಂಕ್ ಪಡೆದಿದ್ದಾರೆ.
ತಮ್ಮ ಸಂತಸದ ಕುರಿತು ದೂರವಾಣಿಯಲ್ಲಿ ಮಾತನಾಡಿದ ಅಕ್ಷಯ್ ಸಿಂಹ ಕೆ.ಜೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಬಗೆಯಲ್ಲಿ ತಯಾರಿ ನಡೆಯುತ್ತೆ. ವಿಷಯ ನೆನಪು ಇಟ್ಟುಕೊಳ್ಳಲು ಮೊಬೈಲ್ ಕಂಪ್ಯೂಟರ್ ಬಳಸುವ ಬದಲು, ಹೆಚ್ಚು ಹೆಚ್ಚು ಬರೆಯುವುದರ ಮೂಲಕ ಅಭ್ಯಾಸಿಸುತ್ತಿದ್ದೆ ಎಂದು ತಿಳಿಸಿದರು.
ಮೊದಲ ಪ್ರಯತ್ನದಲ್ಲಿ ವಿಫಲವಾದರೂ, ಎಲ್ಲಿ ತಪ್ಪಾಗಿದೆ ಎಂದು ತಿಳಿದು ಅದನ್ನ ಎರಡನೇ ಪ್ರಯತ್ನದಲ್ಲಿ ಸರಿಪಡಿಸಿಕೊಂಡು ಪರೀಕ್ಷೆಯನ್ನು ಎದುರಿಸಿದೆ. ಮನೆಯವರ ಪ್ರೋತ್ಸಾಹದಿಂದ ಉತ್ತಮ ರೀತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸಲು ಸಹಕಾರಿ ಆಯ್ತು ಎಂದು ಹೇಳಿದರು.
ದಿನಕ್ಕೆ 6-7 ಗಂಟೆಗಳ ಕಾಲ ಓದಲು ಕೂರುತ್ತಿದ್ದೆ. ಮೊದಲ ಆದ್ಯತೆಯಾಗಿ ಐಎಫ್ಎಸ್ ಸರ್ವೀಸ್ ಎದುರು ನೋಡುತ್ತಿದ್ದೇನೆ ಎಂದರು.
ಇದನ್ನೂ ಓದಿ: UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ: ಶುಭಂ ಕುಮಾರ್ಗೆ 1st ರ‍್ಯಾಂಕ್