ಬೆಂಗಳೂರು: ಆಂಧ್ರ ಪ್ರದೇಶ ಮೂಲದ ಮಹಿಳಾ ಟೆಕ್ಕಿ ಮೇಲೆ ಆತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಅಬುಜಿ ಉಬಾಕಾ ಹಾಗೂ ಟೋನಿ ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಬಂಧನದ ಬಗ್ಗೆ ಪ್ರಾದೇಶಿಕ ವಿದೇಶಿ ನೋಂದಣಿ ಕೇಂದ್ರಕ್ಕೆ (ಎಫ್ಆರ್ಆರ್ಓ) ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೈಜಿರಿಯನ್ ಪ್ರಜೆಗಳ ಹಾವಳಿ ನಿನ್ನೆ ಮೊನ್ನೆಯದಲ್ಲ. ಕೆಲವರು ವಿವಿಧ ವೀಸಾಗಳಡಿ ಬಂದಿದ್ದರೆ, ಇನ್ನೂ ಕೆಲವರು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹಲವು ಕಾನೂನು ಬಾಹಿರ ಚಟುವಟಿಕೆ, ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮಧ್ಯೆ ಇಬ್ಬರು ಅತ್ಯಾಚಾರ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣೆಗೆ ಆಂಧ್ರ ಮೂಲದ ಮಹಿಳಾ ಟೆಕ್ಕಿ ದೂರು ನೀಡಿದ್ದರು. ನೈಜಿರಿಯಾ ಮೂಲದ ಇಬ್ಬರು ಆರೋಪಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಬಾಣಸವಾಡಿ ಪೊಲೀಸರು, ಸಂತ್ರಸ್ತೆ ಹೇಳಿಕೆ ಪ್ರಕಾರ ಪ್ರಾಥಮಿಕ ತನಿಖೆ ನಡೆಸಿದ್ದರು. ಕೆಲ ಸಾಕ್ಷ್ಯಾಧಾರಗಳ ಆಧಾರದಲ್ಲಿ ನೈಜಿರಿಯನ್ ಮೂಲದ ಅಬುಜಿ ಉಬಾಕಾ ಹಾಗೂ ಟೋನಿ ಎಂಬುವರನ್ನು ಬಂಧಿಸಲಾಗಿದೆ.
ಪೊಲೀಸರ ತನಿಖೆ ವೇಳೆ ಕೆಲ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಸಂತ್ರಸ್ತೆಗೆ ಆರೋಪಿ ಟೋನಿ ಎಂಬುವನ ಪರಿಚಯವಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಬಾಣಸವಾಡಿ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ಮೂರು ವರ್ಷಗಳ ಕಾಲ ಅತ್ಯಾಚಾರ: ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆ