ಬೆಂಗಳೂರು: ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುವುದನ್ನು ಸಹಿಸಿಕೊಳ್ಳದೇ ಪೂಜಾರಿ ಮೇಲೆ ಮತ್ತೊಂದು ದೇವಾಲಯದ ಉಸ್ತುವಾರಿಗಳು ದಾಂಧಲೆ ನಡೆಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬನಶಂಕರಿ ಎರಡನೇ ಹಂತದ ಅಂಬೇಡ್ಕರ್ ನಗರದಲ್ಲಿರುವ ಹಟ್ಟಿ ಮಾರಮ್ಮ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಪೂಜಾರಿ ಕುಮಾರಸ್ವಾಮಿ ಎಂಬುವರ ಮೇಲೆ ಅದೇ ಏರಿಯಾದಲ್ಲಿರುವ ಅಂಗಾಳ ಪರಮೇಶ್ವರಿ ದೇವಸ್ಥಾನ ನೋಡಿಕೊಳ್ಳುತ್ತಿದ್ದ ವೆಂಕಟೇಶ್ ಹಾಗೂ ಉಮೇಶ್ ಸೇರಿ ಮೂವರು ದಾಂಧಲೆ ನಡೆಸಿದ್ದಾರೆ ಎಂಬ ಆರೋಪದಡಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಐದು ವರ್ಷಗಳ ಹಿಂದೆ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ ಕೆಲ ತಿಂಗಳ ಹಿಂದೆ ಹಟ್ಟಿಮಾರಮ್ಮ ದೇವಾಲಯ ಪೂಜೆ ಕೆಲಸಕ್ಕೆ ಸೇರಿಕೊಂಡಿದ್ದರು. ಕ್ರಮೇಣ ಹಟ್ಟಿ ಮಾರಮ್ಮ ದೇವಾಲಯಕ್ಕೆ ಭಕ್ತರು ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಹಲವು ಬಾರಿ ಕುಮಾರಸ್ವಾಮಿಯೊಂದಿಗೆ ಆರೋಪಿಗಳು ಜಗಳವಾಡಿದ್ದರು.
ಪ್ರತಿ ವರ್ಷ ವಿಜಯದಶಮಿಗೆ ದೇವರ ಮೆರವಣಿಗೆ ವೇಳೆ ಗಲಾಟೆ ಮಾಡಿಕೊಳ್ಳುತ್ತಿದ್ದ ಗುಂಪು ಈ ಬಾರಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಬೇರೆ ಬೇರೆ ದಿನ ಮೆರವಣಿಗೆ ಮಾಡಲು ಸೂಚನೆ ನೀಡಲಾಗಿತ್ತು. ಅದರಂತೆ ಆಯುಧ ಪೂಜೆ ದಿನ ಕುಮಾರ್ ಹಟ್ಟಿ ಮಾರಮ್ಮನ ಮೆರವಣಿಗೆ ಮಾಡಿದರೆ, ಮಾರನೇ ದಿನ ವಿಜಯ ದಶಮಿಯಂದು ಅಂಗಳಾಪರಮೇಶ್ವರಿ ದೇವಿಯ ಮೆರವಣಿಗೆ ಇತ್ತು.
ಈ ವೇಳೆ ಕುಮಾರ್ ಮನೆ ಮುಂದೆ ಬಂದಿದ್ದ ದೇವರ ಮೆರವಣಿಗೆ ಬಂದಾಗ ಕಾಳಿ ದೇವಿಯ ವೇಷ ಹಾಕಿದ್ದ ಉಮೇಶ್, ದೇವರು ಬಂದಿದೆ ಎಂದು ಹೇಳಿ ಕುಮಾರ್ ಮನೆ ಮುಂದೆ ತಮಟೆ ಬಡಿದು ಮಡಿಕೆಯಲ್ಲಿದ್ದ ರಕ್ತದ ಅನ್ನವನ್ನು ಕುಮಾರ್ ಮೈಮೇಲೆ ಎಸೆದು ವಿಕೃತಿ ಮೆರೆದಿದ್ದಾನೆ. ಸಾಲದಕ್ಕೆ ಮಡಿಕೆಯನ್ನು ಮನೆ ಮುಂದೆ ಒಡೆದು ದರ್ಪ ತೋರಿದ್ದಾನೆ. ಇದನ್ನು ಪ್ರಶ್ನಿಸಿದಕ್ಕೆ ದೇವರ ರೂಪದಲ್ಲಿದ್ದ ಉಮೇಶ್ ಆತನ ಸ್ನೇಹಿತರಿಂದ ಹಲ್ಲೆ ನಡೆಸಿದ್ದಾರೆ.