ಬೆಂಗಳೂರು: ಟೊಮೆಟೊ, ತರಕಾರಿ ಬೆಲೆ ಏರಿಕೆ ಬಿಸಿಯಿಂದ ಹೊರಬಾರದ ಜನರಿಗೆ ಈಗ ಬಾಳೆಹಣ್ಣಿನ ಬೆಲೆ ಹೆಚ್ಚಳ ಮತ್ತೊಂದು ಆಘಾತ ಉಂಟುಮಾಡಿದೆ. ಶ್ರಾವಣ ಮಾಸದಲ್ಲಿ ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಬಾಳೆ ಬೆಲೆ ಸದ್ದಿಲ್ಲದೇ ಹೆಚ್ಚಾಗಿದೆ. ಬಹುಮುಖ್ಯ ಬೇಡಿಕೆಯುಳ್ಳ ಈ ಹಣ್ಣಿನ ಬೆಲೆ ಶತಕ ದಾಟಿರುವುದು ಗ್ರಾಹಕರಿಗೆ ತಲೆಬಿಸಿ ತರಿಸಿದೆ. ಬೇಡಿಕೆ ಹಾಗೂ ಪೂರೈಕೆ ವ್ಯತ್ಯಾಸದಿಂದ ಈ ವಾರ ನಗರದಲ್ಲಿ ಒಂದು ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ದರ 100 ರಿಂದ 140 ರೂ ಆಗಿದೆ.
ಬೆಂಗಳೂರು ಎಪಿಎಂಸಿ ಘಟಕಕ್ಕೆ ತುಮಕೂರು, ರಾಮನಗರ ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರದಿಂದ ಬಾಳೆಹಣ್ಣು ಪೂರೈಕೆಯಾಗುತ್ತದೆ. ಹಾಗೆಯೇ ತಮಿಳುನಾಡಿಗೆ ಹೊಸೂರು ಹಾಗೂ ಕೃಷ್ಣಗಿರಿಯಿಂದ ಹಣ್ಣುಗಳು ಪೂರೈಕೆಯಾಗುತ್ತವೆ. ಹೊರರಾಜ್ಯಗಳಿಂದ ಪೂರೈಕೆ ಕಡಿಮೆ ಇರುವುದರಿಂದ ಏಲಕ್ಕಿ ಬಾಳೆಯ ಸಗಟು ಮಾರಾಟ ಬೆಲೆ ಪ್ರತಿ ಕೆಜಿಗೆ 80 ರೂ ಇದ್ದರೆ ಪಚ್ಚಬಾಳೆ 20 ರೂ ಇದೆ. ಆದರೆ ಸಾಗಾಣಿಕೆ ವೆಚ್ಚವನ್ನೂ ಸೇರಿಸಿ ಚಿಲ್ಲರೆ ಮಾರಾಟ ಬೆಲೆ 100 ರಿಂದ 140 ರೂ ತಲುಪಿದೆ.
ಕೊಡಗು, ಮೈಸೂರು, ಬೆಂಗಳೂರು ಗ್ರಾಮಾಂತರ ಹತ್ತಿರದಲ್ಲಿಯೇ ಇದ್ದರೂ ಅವರು ಬೆಳೆದಂತಹ ಉತ್ಪನ್ನಗಳು ನಗರ ತಲುಪುತ್ತಿಲ್ಲ. ಸಣ್ಣ ಹಿಡುವಳಿದಾರರು ಸಾಗಾಣಿಕಾ ವಾಹನ ಭರ್ತಿಯಾಗುವವರೆಗೂ ಕಾಯುತ್ತಿಲ್ಲ. ಬೇರೆ ಮಾರ್ಗವಿಲ್ಲದ ಕಾರಣ, ರೈತರು ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಓಣಂ, ಗಣೇಶ ಚತುರ್ಥಿ ಸೇರಿದಂತೆ ಹಬ್ಬಗಳು ಸಮೀಪಿಸುತ್ತಿದ್ದು ಬೇಡಿಕೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಬೆಲೆ ಏರಿಕೆಯ ಹಿಂದೆ ಮಧ್ಯವರ್ತಿಗಳ ಕೈವಾಡವಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಹೆಚ್ಚಾಗಿ ತಮಿಳುನಾಡಿನಿಂದ ಪೂರೈಕೆಯಗುತ್ತಿದ್ದ ಏಲಕ್ಕಿ ಬಾಳೆ, ಪಚ್ಚ ಬಾಳೆ ಹಣ್ಣಿಗೆ ಬೇಡಿಕೆಯಿದ್ದು, ಈ ಬಾರಿ ತಮಿಳುನಾಡಿನಿಂದ ಪೂರೈಕೆಯಾಗುವ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ಬೆಲೆ ಏರಿಕೆಗೆ ಕಾರಣ. ಈ ಮೊದಲು ಮಾರುಕಟ್ಟೆಗೆ ತಮಿಳುನಾಡಿನಿಂದ 1,500 ಕ್ವಿಂಟಲ್ ಬಾಳೆಹಣ್ಣುಗಳು ಪೂರೈಕೆಯಾಗುತ್ತಿತ್ತು. ಆದರೆ ಈ ಬಾರಿ ಕೇವಲ 1,000 ಕ್ವಿಂಟಲ್ ಮಾತ್ರ ಪೂರೈಕೆಯಾಗಿದೆ ಎಂದು ಬೆಂಗಳೂರು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದರು.
ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಮಶ್ರೂಮ್ ಮಾರಾಟ ಜೋರು: ಮಾಂಸಕ್ಕೆ ಪರ್ಯಾಯವೆಂದರೆ ಮಶ್ರೂಮ್. ಈ ಅಣಬೆಯನ್ನು ಆಹಾರವಾಗಿಯೂ ಮತ್ತು ಔಷಧಿಯಾಗಿ ಬಳಸಲಾಗುತ್ತಿದೆ. ಇದೀಗ ಮಾನ್ಸೂನ್ ಆಗಮನದ ಬೆನ್ನಲ್ಲೇ ಮಾರುಕಟ್ಟೆಗೆ ಅಣಬೆಗಳು ಲಗ್ಗೆ ಇಟ್ಟಿವೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮಶ್ರೂಮ್ಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಋತುವಿನಲ್ಲಿ ಕಾಡು ಅಣಬೆಗಳು ಲಭ್ಯವಿರುವುದರಿಂದ ಮಹಾರಾಷ್ಟ್ರದಲ್ಲಿ ತರಕಾರಿ ವ್ಯಾಪಾರಸ್ಥರು ಕಾಡಿಗೆ ಹೋಗಿ ಅಣಬೆಗಳನ್ನು ಸಂಗ್ರಹಿಸಿ, ದಿನವಿಡೀ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕಿಲೋಗೆ 1,000 ರೂ.ವರೆಗೆ ಮಾರಾಟವಾಗುತ್ತಿದೆ. ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ಅಣಬೆಯನ್ನು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: Rainfall declines: ದೇಶದ ಹಲವೆಡೆ ಮಳೆ ಕೊರತೆ, ಬಿತ್ತನೆ ಕುಂಠಿತ; ಅಕ್ಕಿ, ಧಾನ್ಯ ಉತ್ಪಾದನೆ ಮೇಲೆ ಪರಿಣಾಮ