ಬೆಂಗಳೂರು: ಕಡಿಮೆ ಬೆಲೆಗೆ ಬಾಳೆ ಸಸ್ಯಗಳನ್ನು ನೀಡುವ ಕಾರಣಕ್ಕೆ ಐಐಹೆಚ್ಆರ್ ಕೃಷಿ ವಿಜ್ಞಾನಿಗಳು ಏಲಕ್ಕಿ ಬಾಳೆಯ ಹೂವಿನ ಅಂಗಾಂಶದಿಂದ ಸಸ್ಯಗಳ ಉತ್ಪಾದನೆ ಮಾಡಿದ್ದಾರೆ.
ಬಾಳೆಯ ಗೊನೆ ಬಿಟ್ಟ ನಂತರ ಕತ್ತರಿಸಿ ಎಸೆಯುವ ಬಾಳೆ ಹೂವಿನಲ್ಲೂ ಸಸ್ಯೋತ್ಪಾದನೆ ಮಾಡುಬಹುದೆಂಬುದನ್ನು ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಕೃಷಿ ವಿಜ್ಞಾನಿಗಳು ಸಾಧಿಸಿದ್ದಾರೆ. ಇಲ್ಲಿಯವರೆಗೂ ಪಚ್ಚೆ ಬಾಳೆ ಮತ್ತು ಇತರ ಬಾಳೆಯ ಅಂಗಾಂಶ ಮತ್ತು ಗೆಡ್ಡೆಗಳ ಸಹಾಯದಿಂದ ಬಾಳೆ ಸಸ್ಯಗಳ ಉತ್ಪಾದನೆ ಮಾಡಲಾಗುತ್ತಿತ್ತು. ಈ ಮಾದರಿಯಲ್ಲಿ ಸಸ್ಯಗಳ ಬೆಲೆ 25 ರೂಪಾಯಿಗಿಂತ ಹೆಚ್ಚಾಗಿರುತ್ತಿತ್ತು. ರೈತರಿಗೆ ಸಹಾಯ ಮಾಡುವ ಕಾರಣಕ್ಕೆ ಸಸ್ಯಗಳ ಬೆಲೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಭಾರತದಲ್ಲಿ ಏಲಕ್ಕಿ ಬಾಳೆಯ ಹೂವಿನ ಅಂಗಾಂಶ ಕೃಷಿಯಿಂದ ಸಸ್ಯೋತ್ಪಾದನೆ ಮಾಡಲಾಗಿದೆ.
ಆಸ್ಟ್ರೇಲಿಯಾ ದೇಶದಲ್ಲಿ ಅಲ್ಲಿನ ಬಾಳೆಯ ತಳಿಯ ಹೂವಿಗೆ ಅಂಗಾಂಶ ಕೃಷಿ ಮಾಡಿ ಸಸ್ಯಗಳ ಉತ್ಪಾದನೆ ಮಾಡಲಾಗಿತ್ತು. ಇದರಿಂದ ಸ್ಫೂರ್ತಿ ಪಡೆದು ಐಐಹೆಚ್ಆರ್ ವಿಜ್ಞಾನಿಗಳು ಏಲಕ್ಕಿ ಬಾಳೆಯ ಹೂವಿನ ಅಂಗಾಂಶ ಕೃಷಿಯಿಂದ ಸಸ್ಯಗಳ ಉತ್ಪಾದನೆ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ತೋಟಗಾರಿಕೆ ಮೇಳ: ಘಮ ಘಮಿಸಿದ ಪುದಿನ ತಳಿಗಳು
ಬಾಳೆ ಗಿಡವು ಗೊನೆ ಬಿಟ್ಟು 7 ತಿಂಗಳ ನಂತರ ಗೊನೆಯ ತುದಿಯಲ್ಲಿರುವ ಹೂಗಳನ್ನು ಕತ್ತರಿಸಿಕೊಳ್ಳಲಾಗುತ್ತದೆ. ಅನಂತರ ಹೂವಿನಲ್ಲಿರುವ ಜೀವಕೋಶಗಳನ್ನು ಸಂಗ್ರಹಿಸಲಿಗುತ್ತೆ. ಅದಕ್ಕೆ ಕೃತಕ ಜೀವಕೋಶಗಳನ್ನು ಸೇರಿಸಿ ಭ್ರೂಣಗಳನ್ನು ಸೃಷ್ಟಿಸಲಾಗುತ್ತದೆ. ಹೊಸ ಜೀವಕೋಶಗಳ ಮೂಲಕ ಒಮ್ಮೆಲೇ ಲಕ್ಷ ಸಸ್ಯಗಳ ಉತ್ಪಾದನೆ ಮಾಡಬಹುದು. ಹೆಚ್ಚು ಸಸ್ಯಗಳ ಉತ್ಪಾದನೆಯಾಗುವುದರಿಂದ ಸಸ್ಯಗಳ ಬೆಲೆ ಕಡಿಮೆಯಾಗಲಿದೆ. ಐಐಹೆಚ್ಆರ್ನ ಈ ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ರೈತರಿಗೆ ಕಡಿಮೆ ಬೆಲೆಗೆ ಏಲಕ್ಕಿ ಬಾಳೆಯ ಸಸಿಗಳು ಸಿಗಲಿವೆ.