ದೊಡ್ಡಬಳ್ಳಾಪುರ: ಬೆಂಗಳೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ವತಿಯಿಂದ ನವೆಂಬರ್ 1 ರಿಂದ ಒಂದು ಲೀಟರ್ ಹಾಲಿಗೆ ರೈತರಿಗೆ ನೀಡಲಾಗುತ್ತಿದ್ದ 2.10 ರೂಪಾಯಿ ಹೆಚ್ಚಳದ ಜೊತೆಗೆ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಮತ್ತೆ 90 ಪೈಸೆ ಸೇರಿಸಿ ಒಟ್ಟು 3 ರೂಪಾಯಿ ನೀಡಲಾಗುತ್ತದೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ ಕುಮಾರ್ ಹೇಳಿದ್ದಾರೆ. ಇದರಿಂದ ರೈತರಿಗೆ ಗುಣಮಟ್ಟದ ಆಧಾರದ ಮೇಲೆ ಒಂದು ಲೀಟರ್ ಹಾಲಿಗೆ ಒಟ್ಟು 38 ರೂಪಾಯಿಗಳವರೆಗೂ ದೊರೆಯಲಿದೆ. ಬಮೂಲ್ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಹಾಲು ಉತ್ಪಾದಕರಿಗೆ ಹೆಚ್ಚುವರಿ ಬೆಲೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟಕ್ಕೆ ಪ್ರತಿದಿನ 16 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ. ಇದರಲ್ಲಿ 10 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ರೈತರ ಹಿತರಕ್ಷಣೆ ಕಾಪಾಡುವ ಸಲುವಾಗಿ ತಾಲ್ಲೂಕು ಹಾಲು ಉತ್ಪಾದಕರ ಹಿತರಕ್ಷಣಾ ಸಮಿತಿ ರಚಿಸಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಅಧ್ಯಕ್ಷರು ಸಮಿತಿಯ ಸದಸ್ಯರಾಗಿರುತ್ತಾರೆ. ತಾಲ್ಲೂಕಿನ ಪ್ರತಿ ಹೋಬಳಿಯಿಂದ ನಾಲ್ಕು ಜನ ಅಧ್ಯಕ್ಷರು ಸಮಿತಿಯಲ್ಲಿ ನಿರ್ದೇಶಕರಾಗಿರಲಿದ್ದಾರೆ. ಸಮಿತಿಯು ಉತ್ಪಾದಕರ ಹಾಗೂ ಒಕ್ಕೂಟದೊಂದಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೀಟರ್ ನಂದಿನಿ ಹಾಲು, ಮೊಸರಿಗೆ 2 ರೂಪಾಯಿ ಹೆಚ್ಚಳ: ನಾಳೆಯಿಂದಲೇ ಹೊಸ ದರ ಜಾರಿ