ಬೆಂಗಳೂರು : ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ತರಲಾಗಿದ್ದ ಹೀಲಿಯಂ ಗ್ಯಾಸ್ ಬಲೂನ್ಗೆ ವಿದ್ಯುತ್ ತಂತಿ ತಗುಲಿ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳತೂರಿನಲ್ಲಿ ಶನಿವಾರ ನಡೆದಿದೆ. ನಿನ್ನೆ ಸಂಜೆ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿರುವಾಗ ದುರಂತ ಸಂಭವಿಸಿದೆ. ವಿಜಯ್ ಕುಮಾರ್ (44), ಧ್ಯಾನ್ (7) ಸಂಜಯ್ (8), ಸೋಹಿಲಾ (03) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಬೆಳತೂರಿನ ಮನೆಯೊಂದರಲ್ಲಿ ಹುಟ್ಟುಹಬ್ಬದ ಆಚರಣೆಗಾಗಿ ಹೀಲಿಯಂ ತುಂಬಿದ ಗ್ಯಾಸ್ ಬಲೂನ್‌ಗಳನ್ನು ತರಲಾಗಿತ್ತು. ಮಕ್ಕಳು ಎರಡನೇ ಮಹಡಿಗೆ ಬಲೂನ್‌ಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಮನೆಯ ಎರಡನೇ ಮಹಡಿ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಬಲೂನ್ಗೆ ಸ್ಪರ್ಶಿಸಿದೆ. ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ನೆರೆದಿದ್ದವರ ಮೇಲೆ ಜ್ವಾಲೆ ವ್ಯಾಪಿಸಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ಸಂಜೀವ ಪಾಟೀಲ್, "ಶನಿವಾರ ಸಂಜೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳತೂರಿನ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬಾಲಕಿಯೊಬ್ಬಳ ಹುಟ್ಟುಹಬ್ಬದ ಪ್ರಯುಕ್ತ ಬಲೂನ್ಗಳಿಗೆ ಗ್ಯಾಸ್ ತುಂಬಿಸಿ ಸಂಭ್ರಮಾಚರಣೆಗೆ ಬಳಸಲಾಗುತ್ತಿತ್ತು. ಈ ಬಲೂನ್‌ಗಳನ್ನು ಮನೆ ಮೇಲಿನ ಮಹಡಿಗೆ ಒಯ್ಯುವಾಗ ಮನೆ ಮುಂದಿದ್ದ ವಿದ್ಯುತ್ ತಂತಿಗೆ ತಗುಲಿದೆ. ಬಲೂನ್ ಸ್ಪೋಟಗೊಂಡು ಉಂಟಾದ ಬೆಂಕಿಯಿಂದ ನಾಲ್ವರು ಮಕ್ಕಳು ಸೇರಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ" ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟ: ಕಳೆದ ಎರಡು ತಿಂಗಳ ಹಿಂದೆ ಜ್ಯುವೆಲ್ಲರಿ ಶಾಪ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟಗೊಂಡು ಓರ್ವ ಸಾವನ್ನಪ್ಪಿ, ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಹಲಸೂರ್ ಗೇಟ್ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಡೆದಿತ್ತು. ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನ ಕರಗಿಸುವ ಕೆಲಸ ಮಾಡುವಾಗ ಸಿಲಿಂಡರ್ ಸ್ಪೋಟಗೊಂಡಿತ್ತು. ಮೃತ ವ್ಯಕ್ತಿಯನ್ನು ವಿಷ್ಣು ಸಾವಂತ್ ಎಂದು ಗುರುತಿಸಲಾಗಿತ್ತು. ವಿಷ್ಣು ಸಾವಂತ್ ಪತ್ನಿ ವೈಜಯಂತಿ ಸುಟ್ಟ ಗಾಯಗಳಿಂದಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಗಡಿ ಮಾಲೀಕ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಾರವಾರದಲ್ಲಿ ಬಸ್ ಟಯರ್ ಸ್ಫೋಟ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ