ಬೆಂಗಳೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ 707 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದ್ದು, 67 ಜನರನ್ನು ಬಂಧಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 60 ಎಫ್ಐಆರ್ಗಳು ದಾಖಲಾಗಿವೆ. 551 ಗೋವುಗಳು, 144 ಎಮ್ಮೆ-ಕೋಣ, 12 ಒಂಟೆಗಳನ್ನು ರಕ್ಷಣೆ ಮಾಡಿ ಸ್ಥಳೀಯ ಗೋ-ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಬಲಿಕೊಡುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ಪ್ರಾಣಿವಧೆ ತಡೆಗಟ್ಟಲು ರಾಜ್ಯದ ಎಲ್ಲ ಗಡಿ ಭಾಗಗಳ ಚೆಕ್ ಪೋಸ್ಟ್ಗಳಲ್ಲಿ ನಿಗಾ ವಹಿಸಲಾಗಿತ್ತು. ಪೊಲೀಸ್ ಇಲಾಖೆಯ ಸಹಕಾರದಿಂದಾಗಿ ಇಂದು ಈ ಮಟ್ಟದಲ್ಲಿ ಜಾನುವಾರುಗಳ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದು ವಿವರಿಸಿದರು.
ಎಲ್ಲಿ ಎಷ್ಟು ಜಾನುವಾರುಗಳ ರಕ್ಷಣೆ?: ಕಲಬುರಗಿ ಜಿಲ್ಲೆಯಲ್ಲಿ 193 ಗೋವು, 4 ಎಮ್ಮೆ ರಕ್ಷಣೆ ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ 92 ಗೋವು ಮತ್ತು 35 ಎಮ್ಮೆ, ತುಮಕೂರು ಜಿಲ್ಲೆಯಲ್ಲಿ 90 ಗೋವು ಮತ್ತು 20 ಎಮ್ಮೆ, ಬೆಂಗಳೂರು ನಗರದಲ್ಲಿ 66 ಗೊವು ಮತ್ತು 11 ಎಮ್ಮೆ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಮೈಸೂರು ಜಿಲ್ಲೆಯಲ್ಲಿ 33 ಗೋವು, 15 ಎಮ್ಮೆ, ಹಾವೇರಿ ಜಿಲ್ಲೆಯಲ್ಲಿ 23 ಎಮ್ಮೆ, 2 ಗೋವು, ಕೋಲಾರದಲ್ಲಿ 21 ಗೋವು, ರಾಯಚೂರಿನಲ್ಲಿ 26 ಎಮ್ಮೆ, ಹಾಸನ 19, ಚಿಕ್ಕಬಳ್ಳಾಪುರದಲ್ಲಿ 10 ಎಮ್ಮೆ, ಚಿತ್ರದುರ್ಗ 7, ಉಡುಪಿ 6, ಶಿವಮೊಗ್ಗ 2, ಬೆಂಗಳೂರು ಗ್ರಾಮಾಂತರ 6, ದಕ್ಷಿಣ ಕನ್ನಡ 21 ಗೋವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ 16 ಪ್ರಕರಣ ದಾಖಲಿಸಿ, 18 ಜನರನ್ನು ಬಂಧಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಿ, 6 ಜನರನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿ, 6 ಜನರನ್ನು ಬಂಧಿಸಲಾಗಿದೆ ಎಂದರು.
ಮಸೀದಿ ಮೌಲ್ವಿಗಳ ಜೊತೆ ಶಾಂತಿ ಸಭೆ: ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೀದಿಗಳ ಮೌಲ್ವಿಗಳೊಂದಿಗೆ ಶಾಂತಿ ಸಭೆಗಳನ್ನು ನಡೆಸಲಾಗಿತ್ತು. ಅದರ ಜೊತೆಗೆ, ಆಟೋಗಳಲ್ಲಿ ಮೈಕ್ ಅಳವಡಿಸಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಹೀಗಾಗಿ, ಕಳೆದ ವರ್ಷಕ್ಕಿಂತ ಈ ವರ್ಷ ಜಾನುವಾರುಗಳ ವಧೆಯಲ್ಲಿ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.