ದೇವನಹಳ್ಳಿ: ಪಟ್ಟಣದಲ್ಲಿ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಒಂದು ದಿನ ಮುಂಚಿತವಾಗಿ ಇಂದು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಪಟ್ಟಣದ ಜಾಮೀಯ ಅಹಲೇ ಅಹದೀಸ್ ಮಸೀದಿಯಲ್ಲಿ ಮುಸ್ಲಿಮರ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು.
ದೇಶದಾದ್ಯಂತ ನಾಳೆ (ಭಾನುವಾರ) ಮುಸ್ಲಿಮರು ಬಕ್ರೀದ್ ಆಚರಿಸಲಿದ್ದಾರೆ. ಆದರೆ, ದೇವನಹಳ್ಳಿಯಲ್ಲಿ ಒಂದು ದಿನ ಮುನ್ನ ದಿನವಾದ ಇಂದು ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಲಾಯಿತು. ಹಬ್ಬದ ನಿಮಿತ್ತ ಮಸೀದಿಯಲ್ಲಿ ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ದೇವನಹಳ್ಳಿಯಲ್ಲಿ ಟಿಪ್ಪು ವಂಶಸ್ಥರು ಆಗಮನದಂದಿನಿಂದಲೂ ಸಡಗರದಿಂದ ಬಕ್ರೀದ್ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದ ನಾಲ್ಕೈದು ದಿನದಿಂದ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈದ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಆಗದ ಕಾರಣ ಮಸೀದಿಯಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಯಿತು.
ಹಿರಿಯರು, ಮಹಿಳೆಯರು, ಮಕ್ಕಳು ಸೇರಿ ಸಾಮೂಹಿಕವಾಗಿಯೇ ಔತಣದಲ್ಲೂ ಪಾಲ್ಗೊಂಡಿದ್ದರು. ಮನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಆವರಣದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಈ 'ಮೇಕೆ' ಬೆಲೆ ಬರೋಬ್ಬರಿ 77 ಲಕ್ಷ ರೂಪಾಯಿ.. ವಿಶೇಷತೆ ಏನು ಗೊತ್ತಾ!?