ಬೆಂಗಳೂರು : ಮಹಾಮಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಕ್ರೀದ್ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಗೈಡ್ಲೈನ್ಸ್ ಪ್ರಕಾರವೇ ಹಬ್ಬ ಆಚರಣೆ ಮಾಡಲು ಸೂಚನೆ ನೀಡಿದೆ.

ಮುಸ್ಲಿಂ ಬಾಂಧವರ 2ನೇ ಪ್ರಮುಖ ಹಬ್ಬವಾಗಿರುವ ಬಕ್ರೀದ್ ಬರುವ ಜುಲೈ 21 ರಂದು ಆಚರಿಸಲಾಗುವುದೆಂದು ರಾಜ್ಯದ ಹಿಲಾಲ್ ಸಮಿತಿ ಘೋಷಿಸಿದೆ. ರಾಜ್ಯದಲ್ಲಿ ಕೋವಿಡ್-19 ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆ ತಡೆಗಟ್ಟಲು ಹೆಚ್ಚಿನ ಜಾಗರೂಕತೆ ಅನುಸರಿಸುವ ಅನಿವಾರ್ಯತೆ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ.

ಪ್ರಮುಖವಾಗಿ ಬಕ್ರೀದ್ ನಿಮಿತ್ತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಆದರೆ ಮಸೀದಿಗಳಲ್ಲಿ 50 ಜನರಿಗಷ್ಟೇ ಪ್ರಾರ್ಥನೆಗೆ ಅನುಮತಿ ನೀಡಿದೆ.
ಮಾರ್ಗಸೂಚಿ ಏನು?
1. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು
2. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡುವುದು
3. ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು
4. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ
5. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ನಿಂದ ತೊಳೆದುಕೊಳ್ಳುವುದು
ಇದನ್ನೂ ಓದಿರಿ: ಪ್ರಧಾನಿ ಜತೆ ಫಲಪ್ರದ ಭೇಟಿ: ಬಿಜೆಪಿ ಭಿನ್ನಮತೀಯರಿಗೆ ಖಡಕ್ ಸಂದೇಶ ನೀಡಿದ್ರಾ ಬಿಎಸ್ವೈ?
6. ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರುವುದು
7. ಹಸ್ತಲಾಘವ ಮತ್ತು ಆಲಿಂಗನ ಮಾಡದಿರಲು ಸೂಚಿಸುವುದು
ಪ್ರಾಣಿ ವಧೆ ಮತ್ತು ಬಲಿದಾನ ಮಾಡುವ ಪ್ರಕ್ರಿಯೆಗೆ ಈ ಕೆಳಕಂಡ ಸ್ಥಳಗಳಲ್ಲಿ ನಿಷೇಧ
1. ರಸ್ತೆಗಳು, ಪಾದಚಾರಿ ಮಾರ್ಗಗಳು.
2. ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್ ಹೋಂ ಒಳ ಹಾಗೂ ಹೊರ ಆವರಣಗಳು
3. ಶಾಲೆ ಕಾಲೇಜುಗಳು ನಡೆಯುತ್ತಿದ್ದಲ್ಲಿ ಅಂತಹ ಶಾಲೆ/ಕಾಲೇಜುಗಳ ಒಳ ಹಾಗೂ ಹೊರ ಆವರಣಗಳು
4. ಆಟದ ಮೈದಾನ, ಮಸೀದಿಗಳ ಹಾಗೂ ಇತರೆ ಧಾರ್ಮಿಕ ಸ್ಥಳ ಹಾಗೂ ಆವರಣ
5. ಉದ್ಯಾನವನಗಳ ಒಳಗೆ ಮತ್ತು ಹೊರಗೆ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧ