ಬೆಂಗಳೂರು: ಬಕ್ರೀದ್ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಶಿವಾಜಿನಗರ, ಚಾಮರಾಜಪೇಟೆ, ನಾಗವಾರ, ಸುದ್ದುಗುಂಟೆಪಾಳ್ಯ ಸೇರಿದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿರುವ ನಗರ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಒದಗಿಸಿದ್ದಾರೆ.
ನಿನ್ನೆ ರಾತ್ರಿಯಷ್ಟೇ ಕೋರಮಂಗಲ, ಕೆ.ಜೆ. ಹಳ್ಳಿ ಸೇರಿ ಮತ್ತಿತರ ಕಡೆಗಳಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖುದ್ದು ತೆರಳಿ ಪರಿಶೀಲಿಸಿದ್ದರು. ಇಂದು ಬೆಳಗ್ಗೆ ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಅಧಿಕಾರಿಗಳೊಂದಿಗೆ ಗಸ್ತು ತಿರುಗಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಕ್ರೀದ್ ಹಬ್ಬ ಹಿನ್ನೆಲೆ ಇಂದು ನಗರದಲ್ಲಿ ವ್ಯಾಪಕ ಬಂದೋಬಸ್ತ್ ವಹಿಸಲಾಗಿದೆ. 45 ಕೆಎಸ್ಆರ್ಪಿ ತುಕಡಿ, ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ನಿನ್ನೆ ರಾತ್ರಿ ಕೂಡ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಡರಾತ್ರಿ 1 ಗಂಟೆವರೆಗೆ ವಾಹನ ತಪಾಸಣೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ನಾನು ಕೂಡ ಬೆಳಗ್ಗೆಯಿಂದಲೂ ನಗರ ಪೂರ್ವ ವಿಭಾಗದಲ್ಲಿ ರೌಂಡ್ಸ್ ಹಾಕಿದ್ದೇನೆ. ಬೆಳಗ್ಗೆಯಿಂದ ಶಾಂತಿಯುತ ಪ್ರಾರ್ಥನೆ ನಡೆದಿದೆ. ಹಾಗಾಗಿ ಇಲ್ಲಿವರೆಗೂ ಯಾವುದೇ ತೊಂದರೆ ಆಗಿಲ್ಲ ಎಂದು ಮಾಹಿತಿ ನೀಡಿದರು.
ಬ್ಯಾಂಕ್ಗೆ ನುಗ್ಗಿ ರೌಡಿ ಶೀಟರ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಗುಂಡೇಟಿಗೆ ಸಂಬಂಧಿಸಿದಂತೆ ಮಾತನಾಡಿ, ಪ್ರದೀಪ್ ಮತ್ತು ರವಿ ಎಂಬ ಆರೋಪಿಗಳನ್ನ ಬಂಧಿಸಲು ತೆರಳಿದಾಗ, ಅವರು ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದಾರೆ. ಬ್ಯಾಂಕ್ ಒಳಗೆ ನುಗ್ಗಿ ಬರ್ಬರ ಹತ್ಯೆ ಮಾಡಿದ್ದಾರೆ. ಬಹಳ ಭೀಕರವಾದ ಘಟನೆಯಾಗಿದ್ದು, ಆರೋಪಿಗಳನ್ನ ಆದಷ್ಟು ಬೇಗ ಪತ್ತೆ ಮಾಡಿದ್ದೇವೆ. ಈ ಪ್ರಕರಣದ ಬಗ್ಗೆ ಆಳವಾಗಿ ತನಿಖೆ ಕೈಗೊಂಡು ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.
ನಗರದಲ್ಲಿ ಅಪರಾಧ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಮುರುಗನ್, ಕಳೆದ 3 ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ತಿಂಗಳಿನಿಂದ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಬಹುತೇಕ ಪ್ರಕರಣಗಳಲ್ಲಿ 24 ಘಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ್ದೇವೆ. ಕೊಲೆ ಕೃತ್ಯಗಳು ಬೇರೆ ಬೇರೆ ವಿಚಾರಕ್ಕೆ ನಡೆದಿವೆ. ಇದಕ್ಕೆ ಒಂದಕ್ಕೊಂದು ಸಂಬಂಧವಿಲ್ಲ. ಎಲ್ಲವೂ ಬೇರೆ ಬೇರೆ ಕಾರಣಗಳಿಂದ ಆಗಿವೆ ಎಂದು ತಿಳಿಸಿದರು.