ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾ ಸಂಘಟನೆಯಾಗಿರುವ ಬಜರಂಗದಳ ಸಂಘಟನೆಯನ್ನ ನಿಷೇಧಿಸುವುದು ಅಗತ್ಯವಾಗಿದೆ. ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹೆಸರಿನಲ್ಲಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಕೆ ಆರ್ ಪುರ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಮೋಹನ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಟನೆಯನ್ನು ನಿಷೇಧ ಮಾಡುವ ನಿರ್ಧಾರ ಸರಿಯಾಗಿದೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಬಜರಂಗದಳ ಸಂಘಟನೆ ನಿಷೇಧಿಸುವ ನಿರ್ಧಾರ ಸ್ವಾಗತಾರ್ಹ. ಅಧ್ಮಾತಿಕ ಅಥವಾ ಸಾಂಸ್ಕೃತಿಕ ಸಂಘಟನೆಯಾಗಿ ಉಳಿದಿದ್ದರೆ ನಿಷೇಧಿಸುತ್ತಿರಲಿಲ್ಲ. ಆದರೆ, ಸಂಘಟನೆ ಹೆಸರಿನಲ್ಲಿ ಗೂಂಡಾಗಿರಿ ಹಿನ್ನೆಲೆಯಿರುವ ವ್ಯಕ್ತಿಗಳು ಸೇರಿಸಿಕೊಂಡು ಕಾನೂನುಬಾಹಿರ ಚಟುವಟಿಕೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ದುಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯನ್ನು ನಿಷೇಧ ಮಾಡುವ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ : ಕೆ ಆರ್ ಪುರ ವಿಧಾನಸಭಾ ಕ್ಷೇತ್ರ ಗೂಂಡಾ ಕ್ಷೇತ್ರವಾಗಿದೆ. ಲೂಟಿ ಮಾಡಿರುವ ಹಣದಲ್ಲಿ ಗೂಂಡಾಗಳನ್ನ ಸಾಕುತ್ತಿದ್ದಾರೆ. ಸೋಲುವ ಭೀತಿಯಿಂದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ. ಗೂಂಡಾ ಸಂಸ್ಕೃತಿ ಬೆಳೆಸಿಕೊಂಡಿರುವ ಬೈರತಿ ಬಸವರಾಜ್ ಅವರನ್ನು ಸೋಲಿಸುತ್ತೇನೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಮತದಾರರೇ ಗೆಲ್ಲಿಸುತ್ತಾರೆ. 13 ರಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜರಂಗದಳ ನಿಷೇಧ ಅಸಾಧ್ಯ: ಇನ್ನೊಂದೆಡೆ ಬಜರಂಗ ದಳ ನಿಷೇಧಿಸುವ ವಿಚಾರ ತುಂಬಾ ನಗು ತರುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರು (ಮೇ 5-2023) ರಂದು ತಿಳಿಸಿದ್ದಾರೆ. ಅನ್ಯಾಯ ಮಾಡಿದವರಿಗೆ ದೇವರು ಶಿಕ್ಷೆ ಕೊಡುತ್ತಾರೆ ಎಂದು ಜನರು ನಂಬುತ್ತಾರೆ. ಅದೇ ಪರಿಸ್ಥಿತಿ ಕಾಂಗ್ರೆಸ್ಗೆ ಬರಲಿದೆ. ಧರ್ಮ ರಕ್ಷಿಸುವ ಸಂಘಟನೆ ನಿಷೇಧಿಸಿದರೆ ಜನ ಚೆನ್ನಾಗಿ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು, ಪ್ರಧಾನಿ ನರೇಂದ್ರ ಮೋದಿಯವರ ಹಾದಿಗೆ ಎಲ್ಲ ನಾಯಕರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಯಾರ ಹಂಗಿಲ್ಲದೇ ಸರ್ಕಾರ ರಚಿಸುತ್ತೇವೆ. 120 - 130 ಸ್ಥಾನಗಳನ್ನು ಗೆಲ್ಲಲು ಚುನಾವಣಾ ತಂತ್ರಗಳನ್ನು ಹೆಣೆದಿದ್ದೇವೆ ಎಂದು ತಿಳಿಸಿದರು.
ಈ ದೇಶ ಹಾಗೂ ರಾಜ್ಯವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಜೆಡಿಎಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಬಿಜೆಪಿ 9 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಮೂರು ಪಕ್ಷಗಳು ಎಷ್ಟು ಭರವಸೆಗಳನ್ನು ಜನರಿಗೆ ನೀಡಿದ್ದೆವು. ಎಷ್ಟನ್ನು ಈಡೇರಿಸಿವೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟು ಮತಯಾಚನೆ ಮಾಡುತ್ತೇವೆ ಎಂದರು.
ರಿಪೋರ್ಟ್ ಕಾರ್ಡ್ಗಳನ್ನು ಮೌಲ್ಯಮಾಪನ ಮಾಡಲಿ, ತಮಗೆ ಯಾವ ಸರ್ಕಾರ ಬೇಕು ಎಂದು ಜನರೇ ತೀರ್ಮಾನ ಮಾಡಲಿ. ಆ ಮೂಲಕ ಹೊಸದೊಂದು ಚುನಾವಣೆ ದಿಕ್ಕು ನೀಡೋಣ, ಈ ಚುನಾವಣೆಯನ್ನು ಪ್ರಜಾತಂತ್ರದ ಮೌಲ್ಯದ ಆಶಯದಲ್ಲಿ ನಡೆಸಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಇದಕ್ಕೆ ಬದ್ಧರಾಗಬೇಕು ಎಂದು ನುಡಿದರು.
ಇದನ್ನೂ ಓದಿ : ಬಜರಂಗದಳ ನಿಷೇಧ ಅಸಾಧ್ಯ: ಮಾಜಿ ಕೇಂದ್ರ ಸಚಿವ ಸದಾನಂದಗೌಡ