ಬೆಂಗಳೂರು : 4 ಸಾರಿಗೆ ನಿಗಮಗಳ ನೌಕರರಿಂದ ಎರಡನೇ ದಿನದ ಪ್ರತಿಭಟನೆ ವಿಶೇಷ ರೀತಿ ಮುಂದುವರೆದಿದೆ. ನಗರದ ಹೃದಯ ಭಾಗವಾದ ಮೆಜೆಸ್ಟಿಕ್‌ನಲ್ಲಿ ಬೋಂಡಾ, ಬಜ್ಜಿ, ಟೀ, ಕಾಫಿ ಮಾಡಿ ಮಾರಾಟ ಮಾಡುವ ಮೂಲಕ ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ.
ಈ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ನೌಕರರು ಮನವಿ ಮಾಡಿದ್ದಾರೆ. ಸಾರಿಗೆ ನೌಕರರ ಒಕ್ಕೂಟ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ನೌಕರರರಿಂದ ಇದೆ ಮಾದರಿ ಇಂದು ಪ್ರತಿಭಟಿಸಲಾಗಿದೆ.
ನಿನ್ನೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ರು. ಇಂದು ಬೋಂಡಾ, ಬಜ್ಜಿ, ಟೀ, ಕಾಫಿ ಮಾರಾಟದ ಮೂಲಕ ಪ್ರತಿಭಟಿಸುತ್ತಿದ್ದಾರೆ. ಬಜ್ಜಿ, ಬೋಂಡಾ ಮಾಡಿದ ನಂತರ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಾಂಕೇತಿಕವಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗಿದೆ. ನೌಕರರರಿಗೆ ಅರೆ ಹೊಟ್ಟೆ ಜೀವನ ಕೊಡುವ ನೀತಿ ಖಂಡಿಸುತ್ತೇವೆ.
ನೌಕರರಿಗೆ ಯೋಗ್ಯ ವೇತನ ನೀಡಬೇಕು. 40 ವರ್ಷದಿಂದ ಸರ್ಕಾರ ಮೋಸ ಮಾಡಿದೆ. ಸರ್ಕಾರ ಕೊಟ್ಟ ಮಾತನ್ನು ತಪ್ಪಿದೆ. ಯಡಿಯೂರಪ್ಪ ಮಾತನ್ನು ಉಳಿಸಿಕೊಳ್ಳಬೇಕು. ಹೀಗಾಗಿ, ಇವತ್ತು ಬಜ್ಜಿ, ಬೋಂಡಾ ಹಾಕೋ ಮೂಲಕ ಪ್ರತಿಭಟನೆ ಮಾಡಿದ್ದೇವೆ. ಇನ್ನೂ, 4 ದಿನ ಕೂಡ ವಿಭಿನ್ನವಾಗಿ ಪ್ರತಿಭಟಿಸುತ್ತೇವೆ. ಸರ್ಕಾರ ಎಚ್ಚತ್ತಿಲ್ಲ ಅಂದ್ರೆ 7ನೇ ತಾರೀಖು ಸಾರಿಗೆ ಬಂದ್ ಮಾಡುತ್ತೇವೆ ಅಂತ ಹೇಳಿದ್ರು.