ಬೆಂಗಳೂರು: ಕೊರೊನಾ ಲಾಕ್ಡೌನ್ ತಪಾಸಣೆ ವೇಳೆ ಪೊಲೀಸರಿಗೆ ಒಬ್ಬ ಅತಿಥಿ ಸಿಕ್ಕಿದ್ದಾನೆ. ಇದನ್ನು ಪೊಲೀಸ್ ಸಿಬ್ಬಂದಿ ಈತನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.
ದೇಶವ್ಯಾಪಿ ಲಾಕ್ಡೌನ್ ಸ್ಥಿತಿಯಿಂದಾಗಿ ಪೊಲೀಸ್ ಸಿಬ್ಬಂದಿ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಜನರು ಮನೆಗಳಿಂದ ಹೊರಬಂದು ಸುಖಾಸುಮ್ಮನೆ ರಸ್ತೆಗಳಲ್ಲಿ ತಿರುಗಾಡದಂತೆ ತಡೆಯಲು ನಮ್ಮ ಪೊಲೀಸರು ಹದ್ದಿನ ಕಣ್ಣಿಟ್ಟು ಎಲ್ಲರ ಸುರಕ್ಷತೆಗಾಗಿ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಪೊಲೀಸರಿಗೆ ವಿಶೇಷ ಅಥಿತಿ ಸಿಕ್ಕಿದ್ದು, ಅವನೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ಮಾರ್ಚ್ ತಿಂಗಳ 30ರಂದು ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ವಾಹನ ತಪಾಸಣೆ ವೇಳೆ ಆಕಸ್ಮಿಕವಾಗಿ ಸುಂದರವಾದ ಗಂಡು ಕರು ಸಿಕ್ಕಿತ್ತು. ಅದನ್ನು ಠಾಣೆಗೆ ತಂದು ಇಲ್ಲಿನ ಪೊಲೀಸರು ಸಾಕುತ್ತಿದ್ದಾರೆ. ಈ ನಡುವೆ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅವರಿಗೆ ಬಹಳ ಆಪ್ತವಾಗಿರುವ ಈ ಕರುವಿಗೆ ಅವರು ‘ಭೀಮ’ ಎಂದು ಹೆಸರಿಟ್ಟು ಮುದ್ದಿನಿಂದ ನೋಡಿಕೊಳ್ಳುತ್ತಿದ್ದಾರೆ.
ಪ್ರತಿದಿನ ಭೀಮನಿಗೆ 10-15 ಲೀಟರ್ ಹಾಲನ್ನು ಕುಡಿಸುತ್ತಿದ್ದಾರೆ. ಜೊತೆಗೆ ಜೋಳ, ಕಡಲೆ ಬೇಳೆ ಜೊತೆಗೆ ಬೆಲ್ಲದ ಮಿಶ್ರಣವನ್ನು ನೀಡುತ್ತಿದ್ದಾರೆ. ಠಾಣೆಯ ಎಲ್ಲಾ ಸಿಬ್ಬಂದಿ ಮೊದಲು ಬಂದು ಮಾತನಾಡಿಸಿ ಮುದ್ದು ಮಾಡುವುದು ಈ ಭೀಮನನ್ನೇ. ಈಗಲೂ ಮುದ್ದಾಗಿದ್ದಾನೆ. ಮುಂದೆಯೂ ಇದೇ ರೀತಿ ಮುದ್ದಾಗಿ ಬೆಳೆಸುತ್ತೇವೆ. ಎಷ್ಟೇ ಕಷ್ಟ ಬಂದರೂ ಈತ ನಮ್ಮಲ್ಲೇ ಬೆಳೆಯುತ್ತಾನೆ. ನಾವೇ ಸಾಕಿ ಕೊಳ್ಳುತ್ತೇವೆ ಎನ್ನುತ್ತಾರೆ ಇನ್ಸ್ಪೆಕ್ಟರ್ ರಫಿ.
ಇನ್ನು, ಭೀಮನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಬೈಯ್ಯಪ್ಪನಹಳ್ಳಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.