ಬೆಂಗಳೂರು: ಇಸ್ಲಾಂ ಧರ್ಮೀಯರ ಪವಿತ್ರ ಕುರಾನ್ ಗ್ರಂಥವನ್ನು ಕೊರೊನಾ ಸೋಂಕಿಗೆ ಹೋಲಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟಿದ್ದ ಆರೋಪಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆದ ಸುಳ್ಯ ನಿವಾಸಿ ಕುಸುಮಧರ ಕನಿಯೂರುಗೆ ನಿರೀಕ್ಷಣಾ ಜಾಮೀನು ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಏಕಸದಸ್ಯ ಪೀಠವು ಆರೋಪಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಯು 25 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. 15 ದಿನಗಳ ಒಳಗೆ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ : ಆರೋಪಿ ಕುಸುಮಧರ ಕನಿಯೂರು, ಕುರಾನ್ ಗ್ರಂಥ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶ ಹರಿಬಿಟ್ಟಿದ್ದಾನೆ ಎಂದು ಮೊಹಮ್ಮದ್ ಷಹೀರ್ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಅರ್ಜಿದಾರನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ ಮತ್ತು 505(2) ಅನ್ವಯ ಪ್ರಕರಣ ದಾಖಲಿಸಿಕೊಂಡು, ಮಂಗಳೂರು ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರಿಂದ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಲಾಗಿತ್ತು.