ಬೆಂಗಳೂರು: ಹಗಲಿನಲ್ಲಿ ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡಿ ರಾತ್ರಿ ಹೊತ್ತು ಮನೆಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ವಿರಾಜಪೇಟೆಯ ಮೂಲದ ಸುಮನ್ ಬಂಧಿತ ಆರೋಪಿ. ಈತನಿಂದ 10 ಲಕ್ಷ ಮೌಲ್ಯದ 216 ಗ್ರಾಂ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದ ಸುಮನ್, ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡುತ್ತಿದ್ದ. ಜಸ್ಟ್ ಡಯಲ್ ಮೂಲಕ ವಾಷಿಂಗ್ ಮಷಿನ್ ರಿಪೇರಿ ಆರ್ಡರ್ ಪಡೆಯುತ್ತಿದ್ದನಂತೆ. ರಿಪೇರಿಗಾಗಿ ಗ್ರಾಹಕರ ಮನೆಗಳಿಗೆ ಹೋಗುತ್ತಿದ್ದ ಈತ ಅಲ್ಲಿಂದಲೇ ಕಳ್ಳತನದ ಸಂಚು ರೂಪಿಸುತ್ತಿದ್ದ ವಿಚಾರ ವಿಚಾರಣೆ ವೇಳೆ ಬಯಲಾಗಿದೆ.
ಓದಿ: 26/11 ಮುಂಬೈ ದಾಳಿಯ ಪಾತಕಿ ಲಖ್ವಿ ಪಾಕಿಸ್ತಾನದಲ್ಲಿ ಅರೆಸ್ಟ್
ರಿಪೇರಿ ಮಾಡಲು ತೆರಳಿದ್ದ ಮನೆಯ ಅಕ್ಕ ಪಕ್ಕದಲ್ಲಿ ಬೀಗ ಹಾಕಿರುವ ಮನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ರಾತ್ರಿ ವೇಳೆ ಮನೆಯ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಎವೈಆರ್ ಲೇಔಟ್ ನಿವಾಸಿಯಾಗಿರುವ ಸಂಧ್ಯಾ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.
ಇತ್ತೀಚೆಗೆ ಶೆಟ್ಟಿಹಳ್ಳಿ ರೈಲ್ವೆ ಗೇಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಕಳ್ಳತನ ಮಾಡಿ ಅದರಿಂದ ಬರುವ ಹಣದಿಂದ ಐಷಾರಾಮಿ ಜೀವನ ಮತ್ತು ದುಶ್ಚಟಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.