ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ಸಲುವಾಗಿ ಟ್ರಸ್ಟಿ ಆಗಿರುವ ರಾಹುಲ್ ಗಾಂಧಿ ಅವರನ್ನು ನಿತ್ಯ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಕಾನೂನು ರೀತಿಯಲ್ಲಿ ವಿಚಾರಣೆ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ತನಿಖೆ ಹೆಸರಿನಲ್ಲಿ ಅನಗತ್ಯ ಕಿರುಕುಳ, ಸುಳ್ಳು ಕೇಸ್ ಹಾಕುವುದು ಸರಿಯಲ್ಲ. ಇದನ್ನು ದೇಶಾದ್ಯಂತ ನಮ್ಮ ಪಕ್ಷ ಖಂಡಿಸುತ್ತಿದೆ. ಬ್ರಿಟಿಷರ ಕಾಲದಲ್ಲಿಯೂ ಇಂತಹ ಹತ್ತಿಕ್ಕುವ ಪ್ರಯತ್ನ ನಡೆದಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಪ್ರತಿಭಟನೆ ನಮ್ಮ ಹಕ್ಕು: ನಮ್ಮ ನಾಯಕರ ತ್ಯಾಗ ಇತಿಹಾಸದ ಪುಟ ಸೇರಿದೆ. ಇವರಿಗೆ ಕಿರುಕುಳ ನೀಡುವುದು ಎಷ್ಟು ಸರಿ?. ಕಳೆದ ಮೂರು ದಿನದಿಂದ ಎಐಸಿಸಿ ಕಚೇರಿಯನ್ನೇ ದೌರ್ಜನ್ಯದ ಮೂಲಕ ಬಿಜೆಪಿ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಂತಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ ಎನ್ನಬೇಕಾಗಿದೆ. ಎಮರ್ಜೆನ್ಸಿ ಸಮಯದಲ್ಲೂ ಇಂತಹ ಸ್ಥಿತಿ ಎದುರಾಗಿರಲಿಲ್ಲ. ಪ್ರತಿಭಟನೆ ಸಂವಿಧಾನ ಬದ್ಧ ಹಕ್ಕು. ಇದನ್ನು ಹತ್ತಿಕ್ಕುವ ಹಕ್ಕು ಸರ್ಕಾರಕ್ಕೆ ಇಲ್ಲ. ಶಾಂತಿಯುತ ಪ್ರತಿಭಟನೆ ಮಾಡುವವರ ವಿರುದ್ಧ ಕ್ರಮ ಯಾಕೆ?. ಅಪರಾಧಿಗಳಿಗೂ ಈ ರೀತಿ ನಡೆಸಿಕೊಳ್ಳುವುದಿಲ್ಲ. ನಮ್ಮ ಹೋರಾಟದ ಹಕ್ಕನ್ನು ಧಮನ ಮಾಡಲು ಇವರಿಂದ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಕೇಡುಗಾಲ ಬಂದಿದೆ: ಬಂಧಿಸುವುದಾದರೆ ಬಂಧಿಸಿ. ವಿಚಾರಣೆ ನೆಪದಲ್ಲಿ 8 ರಿಂದ10 ಗಂಟೆ ಕೂರಿಸಿಕೊಳ್ಳುವುದು ಎಷ್ಟು ಸರಿ? ಸಂವಿಧಾನದ ಹಕ್ಕನ್ನು ಗಾಳಿಗೆ ತೂರಿ ಜನರ ಹಕ್ಕು ಕಿತ್ತುಕೊಳ್ಳುತ್ತಿದ್ದೀರಿ. ಜನ ಸುಮ್ಮನಿರಲ್ಲ. ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಗೆ ಕೇಡುಗಾಲ ಬಂದಿದೆ. ನಾಳೆ ನಮ್ಮ ಎಲ್ಲಾ ನಾಯಕರು ರಾಜಭವನ ಮುತ್ತಿಗೆಯಲ್ಲಿ ಭಾಗವಹಿಸುತ್ತಾರೆ. ನಾವು ತ್ಯಾಗ ಬಲಿದಾನಕ್ಕೆ ಹೆಸರಾದವರು. ಸಂಘ ಪರಿವಾರದವರು, ಬಿಜೆಪಿಯವರು ಹೋರಾಟದಿಂದ ಬಂಧವರಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಘಟನೆಯನ್ನು ಖಂಡಿಸುತ್ತೇವೆ. ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಾಗೆಲ್ಲ ರಾಜ್ಯದ ಜನ ಎದ್ದು ನಿಂತು ಹೋರಾಡಿದ್ದಾರೆ. ಜನ ದಂಗೆ ಏಳುವ ಸಮಯ ಬಂದಿದೆ. ಬಿಜೆಪಿಯವರೇ ಎಚ್ಚರಿಕೆಯಿಂದ ಇರಿ. ಹೈಕೋರ್ಟ್ ನಿರ್ದೇಶನ ಇರುವಾಗ ಪ್ರತಿಭಟನೆ ಮಾಡುವಂತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೋರ್ಟ್ನನ್ನು ಗೌರವಿಸುತ್ತೇವೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಉತ್ತರಿಸಿದರು.
ಇದನ್ನೂ ಓದಿ: ಮ್ಯಾಜಿಕ್ ಮಾಡಿದ ಮೀಸೆ ಮಾವ : ಅರುಣ್ ಶಹಾಪುರ ಗೆಲುವಿನ ಓಟಕ್ಕೆ ಬ್ರೇಕ್
ಸಿದ್ದರಾಮಯ್ಯ ಮಾತನಾಡಿ, ನಾವು ಒಂದು ಚಡ್ಡಿ ಸುಟ್ಟೆವು ಅಂತ ಎನ್ಎಸ್ಯುಐ ಅಧ್ಯಕ್ಷರ ವಿರುದ್ಧ ಕೇಸ್ ಹಾಕಿದರು. ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ನನ್ನ ಮನೆಯ ಹತ್ತಿರ ಹಳೆ ಚಡ್ಡಿ ಹೊತ್ತುಕೊಂಡು ಬಂದಿದ್ದ. ಅದರ ವಿರುದ್ಧ ಕೇಸ್ ದಾಖಲಿಸಿದ್ರಾ? ಅವರಿಗೆ ಒಂದು ನ್ಯಾಯ, ನಮಗೊಂದು ನ್ಯಾಯವಾ? ಹೈಕೋರ್ಟ್ ನಿರ್ದೇಶನ ಸರ್ಕಾರ ಪಾಲಿಸಿದೆಯಾ? ಎಂದು ಪ್ರತಿಪಕ್ಷ ನಾಯಕರು ಪ್ರಶ್ನಿಸಿದರು.