ಬೆಂಗಳೂರು: ಲಾಲ್ ಕೃಷ್ಣ ಅಡ್ವಾಣಿ ಅವರ ದೂರ ದೃಷ್ಟಿಯ ಚಿಂತನೆಯನ್ನು ನ್ಯಾಯಾಲಯ ಎತ್ತಿಹಿಡಿಯುವ ರೀತಿ ತೀರ್ಪು ನೀಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶಕ್ಕೆ ನೆಲದ ಹಕ್ಕು ಇದೆ ಎನ್ನುವುದನ್ನು ತೀರ್ಪಿನ ಮೂಲಕ ಕೋರ್ಟ್ ಕೊಟ್ಟಿದೆ. ನಮ್ಮೆಲ್ಲರ ಪಿತಾಮಹ ಲಾಲ್ ಕೃಷ್ಣ ಅಡ್ವಾಣಿ ಅವರ ದೂರದೃಷ್ಟಿಯ ಚಿಂತನೆ ಮುಂದಿನ ಪೀಳಿಗೆಗೆ ಅವರು ಕೊಟ್ಟಿರುವ ದೊಡ್ಡ ಕೊಡುಗೆ. ದೇಶದ ನೂರಾ ಮೂವತ್ತು ಕೋಟಿ ಜನ ಕೂಡ ಸ್ವಾಗತ ಮಾಡಲಿದ್ದಾರೆ. ಅಡ್ವಾಣಿ ಅವರ ದೂರದೃಷ್ಟಿಯ ಚಿಂತನೆ ಭಾರತೀಯರಿಗೆ ಸಾವಿರಾರು ವರ್ಷಗಳ ಕಾಲ ಇತಿಹಾಸದ ಪುಟದಲ್ಲಿ ರಾಮಮಂದಿರ ವಿಚಾರ, ಬಾಬರಿ ಮಸೀದಿ ವಿಚಾರ ಇರುವಂತೆ ಮಾಡಿದೆ. ಭಾರತದ ಐತಿಹಾಸಿಕ ನಡೆದು ಬಂದ ದಾರಿ ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಅಡ್ವಾಣಿ ದೂರ ದೃಷ್ಟಿಯ ಚಿಂತನೆ ಉತ್ತಮವಾದದ್ದು, ಇದನ್ನು ಇಂದು ನ್ಯಾಯಪೀಠ ಎತ್ತಿ ಹಿಡಿದಿದೆ ಎಂದರು.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಜನ ಆಪಾದಿತರನ್ನು ನ್ಯಾಯಾಲಯ ದೋಷ ಮುಕ್ತಗೊಳಿಸಿದೆ. ಪ್ರಕರಣ ಪೂರ್ವಯೋಜಿತ ಕೃತ್ಯ ಅಲ್ಲ ಎನ್ನುವುದನ್ನು ತೀರ್ಪು ಎತ್ತಿಹಿಡಿದಿದೆ. ಈ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಅಂದು ಬಾಬರಿ ಮಸೀದಿ ಘಟನೆ ನೆಪವಾಗಿಟ್ಟುಕೊಂಡು 1992 ರಲ್ಲಿ ಬಿಜೆಪಿಯ 4 ಸರ್ಕಾರಗಳನ್ನು ವಜಾ ಮಾಡುವ ಕೆಲಸ ನಡೆಯಿತು. ಅಂತಹ ಸಂವಿಧಾನಬಾಹಿರ ಕೆಲಸ ಆಗಿತ್ತು. ಆದರೆ, ಈಗ ಸತ್ಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಅಂದು 4 ಸರ್ಕಾರಗಳನ್ನು ವಜಾ ಮಾಡಿದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಇತಿಹಾಸ ಬಲ್ಲವರಿಗೆ ವಾಸ್ತವಿಕ ಸತ್ಯ ಗೊತ್ತಿದೆ. ಬಿಜೆಪಿಯಲ್ಲಿ ಅಜೆಂಡಾದಲ್ಲಿ ಮಸೀದಿಯನ್ನು ಒಡೆಯುವುದು ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಕೂಡ ತೀರ್ಪನ್ನು ಸ್ವಾಗತಿಸಿದ್ದಾರೆ. ಕೊನೆಗೂ ನ್ಯಾಯ ಗೆದ್ದಿದೆ 28 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ. ನಿಜಕ್ಕೂ ಈ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ ಎಂದಿದ್ದಾರೆ.