ಬೆಂಗಳೂರು : ವಾಹನ ನಿಲುಗಡೆ ಮಾಹಿತಿ ನೀಡುವ ನಾಮಫಲಕವಿಲ್ಲದಿದ್ದರೆ ಆ ಪ್ರದೇಶವೂ ನೋ ಪಾರ್ಕಿಂಗ್ ಎಂದರ್ಥ. ಹೀಗಾಗಿ, ಅಂತಹ ಸ್ಥಳಗಳಲ್ಲೂ ವಾಹನ ನಿಲ್ಲಿಸಬಾರದು ಎಂದು ವಾಹನ ಸವಾರರಿಗೆ ನಗರ ಸಂಚಾರ ಇಲಾಖೆಯ ಜಂಟಿ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ಮನವಿ ಮಾಡಿದ್ದಾರೆ.
ನಗರದಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಸಾರ್ವಜನಿಕರ ಹಲ್ಲೆ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದರು. ಎಲ್ಲಾ ಪಾರ್ಕಿಂಗ್ ಬೋರ್ಡ್ ಹೊರತುಪಡಿಸಿ ಉಳಿದೆಲ್ಲ ಸ್ಥಳಗಳು ನೋ ಪಾರ್ಕಿಂಗ್ ಎಂದೇ ಪರಿಗಣಿಸಬೇಕು. ಬೋರ್ಡ್ ಹಾಕಿಲ್ಲ ಎಂದು ವಾಹನ ನಿಲ್ಲಿಸಬಾರದು ಎಂದರು.
ನಿಗದಿತ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದರೆ ಅಲ್ಲೇ ಬೋರ್ಡ್ ಹಾಕಿರುತ್ತೇವೆ. ಬೆಂಗಳೂರಿನಲ್ಲಿ 14 ಸಾವಿರ ಕಿಲೋಮೀಟರ್ ರಸ್ತೆಯಿದೆ. ಪ್ರತಿ 100 ಮೀಟರ್ ಗೆ ನೋ ಪಾರ್ಕಿಂಗ್ ಬೋರ್ಡ್ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಗಮನಕ್ಕೆ ತರಬೇಕು : ಟೋಯಿಂಗ್ ಸಿಬ್ಬಂದಿಗೆ ಅವರದೇ ಆದ ಮಾನದಂಡಗಳಿವೆ. ಅದನ್ನು ಅವರು ಪಾಲಿಸಬೇಕು. ಟೋಯಿಂಗ್ ಸಿಬ್ಬಂದಿಯು ಕಾನೂನು ನಿಯಮ ಉಲ್ಲಂಘಿಸಿರುವುದು ಅಥವಾ ಅನುಚಿತ ವರ್ತನೆ ತೋರುವುದು ಕಂಡು ಬಂದರೆ, ನಮ್ಮ ಗಮನಕ್ಕೆ ತರಬೇಕು.
ಅದನ್ನು ಬಿಟ್ಟು ಬೈಕ್ ಟೋಯಿಂಗ್ ಮಾಡುತ್ತಾರೆ ಎಂದು ಸಾರ್ವಜನಿಕರು ಹಲ್ಲೆ ಮಾಡುವುದು ತಪ್ಪು. ಈಗಾಗಲೇ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ರೌಡಿಶೀಟರ್ ಪ್ರಕರಣ ದಾಖಲಿಸಲಾಗಿದೆ ಎಂದರು.
ನಗರದ ವಿವಿಧೆಡೆ ವ್ಹೀಲಿಂಗ್ ಮಾಡುತ್ತಿದ್ದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗಿದೆ. ವ್ಹೀಲಿಂಗ್ ಪ್ರಕರಣಗಳಲ್ಲಿ 18 ರಿಂದ 20 ವರ್ಷ ಒಳಗಿನ ಯುವಕರೇ ಹೆಚ್ಚಾಗಿದ್ದಾರೆ ಎಂದರು.
ಜೈಲಿಗೆ ಕಳುಹಿಸಲಾಗುವುದು : ಅಪ್ರಾಪ್ತ ಬಾಲಕರ ತಂದೆ-ತಾಯಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಪೋಷಕರಿಗೆ ಒಂದು ದಿನದ ಕೌನ್ಸೆಲಿಂಗ್ ನೀಡುತ್ತೇವೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ಯಾವ ವಯಸ್ಸಿಗೆ ವಾಹನ ನೀಡಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗುವುದು. ತಪ್ಪಿತಸ್ಥರಿಗೆ 5 ರಿಂದ 10 ಲಕ್ಷ ಬಾಂಡ್ ಅಥವಾ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ಓದಿ: ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಮರು ಹಂಚಿಕೆ ಮಾಡಿ ಸರ್ಕಾರದ ಆದೇಶ..!