ಬೆಂಗಳೂರು: ಅಮಿತ್ ಶಾ ಯಾವುದೇ ರಾಜ್ಯಕ್ಕೆ ಹೋದರೂ ಬದಲಾವಣೆ ಆಗುತ್ತದೆ. ಬಿಜೆಪಿ ಶಾಸಕರಿಗೆ ವೀಳ್ಯೆದೆಲೆ ಶಾಸ್ತ್ರ ಮಾಡಲು ಅವರು ಇಲ್ಲಿಗೆ ಬಂದಿದ್ದರೇ?. ಇಲ್ಲಿಗೆ ಬಂದಿದ್ದ ಗೃಹ ಮಂತ್ರಿ, ಮುಖ್ಯಮಂತ್ರಿಗಳಿಗೆ ಏನು ಹೇಳಿದರು ಎಂದು ಗೊತ್ತಾದರೆ ಎಲ್ಲವೂ ತಿಳಿಯುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಟೀಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಅವರದೇ ಪಕ್ಷದ ನಾಯಕರು ಸಾಕಷ್ಟು ಮುನ್ಸೂಚನೆ ನೀಡಿದ್ದಾರೆ. ಅದಕ್ಕೂ ಮಿಗಿಲಾಗಿ ಯತ್ನಾಳ್ ಅವರ ಪ್ರಕಾರ ರಾಜ್ಯದಲ್ಲಿ ಸಿಎಂ ಆಗಬೇಕಾದರೆ 2,500 ಕೋಟಿ ರೂಪಾಯಿ ಹಣ ಬೇಕಿದೆ ಎಂದು ವ್ಯಂಗ್ಯವಾಡಿದರು.
ಅಮಿತ್ ಶಾ ಅವರು ಬಂದು ಹೋಗಿದ್ದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನಂತರ ಮತ್ತೊಬ್ಬರು ಈ ಹಣ ಪಾವತಿಸಿರಬೇಕು. ಅದಕ್ಕಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಇದು ಹೊಸತೇನಲ್ಲ. ಉತ್ತರಾಖಂಡದಲ್ಲಿ 3 ಮುಖ್ಯಮಂತ್ರಿಯನ್ನು ಬದಲಿಸಿ ನಾಲ್ಕನೇ ಮುಖ್ಯಮಂತ್ರಿ ನೇತೃತ್ವದಲ್ಲಿ ಅವರು ಚುನಾವಣೆಗೆ ಹೋಗಿದ್ದರು. ಮುಂಬರುವ ಚುನಾವಣೆಗೆ ಅನುಕೂಲವಾಗಲು ಬೇರೆಯವರಿಂದ ಈ ಹಣ ಪಡೆದಿರಬೇಕು ಅಥವಾ ಬೊಮ್ಮಾಯಿ ಅವರೇ ಮತ್ತೆ ಈ ಹಣವನ್ನು ನೀಡಬೇಕಾಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಯತ್ನಾಳ್ ಅವರನ್ನು ಸಂಪರ್ಕಿಸಿ. ಅವರು ಸಂಪೂರ್ಣ ವಿವರ ನೀಡುತ್ತಾರೆ ಎಂದು ಕಾಲೆಳೆದರು.
ಇದನ್ನೂ ಓದಿ: ಈದ್ಗಾ ಮೈದಾನ ಏನ್ ಜಮೀರ್ ಅಹ್ಮದ್ ಖಾನ್ ಅಪ್ಪನ ಆಸ್ತಿಯೇ?: ಸಿ ಟಿ ರವಿ