ಬೆಂಗಳೂರು: ನಗರದಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಕೊರೊನಾ ಹಿನ್ನೆಲೆ ಕೆಎಸ್ ಆರ್ ಟಿಸಿ, ಬಿಎಂಟಿಸಿಯಲ್ಲಿ ಚಾಲಕರು ಸರಳವಾಗಿ ಹಬ್ಬವನ್ನ ಆಚರಿಸಿದ್ದಾರೆ.
ಪ್ರತಿ ವರ್ಷವು ವಿಜಯದಶಮಿ-ಆಯುಧಪೂಜೆ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಅದರಂತೆ, ಈ ವರ್ಷವೂ ನಿಗಮಗಳ ವಾಹನಗಳಿಗೆ ಪೂಜೆ ಮಾಡುವಂತೆ ಸೂಚಿಸಲಾಗಿತ್ತು. ಇದಕ್ಕಾಗಿ ಪ್ರತಿ ಬಸ್ಗೆ 100 ರೂ. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ. ನೀಡಲಾಗಿತ್ತು. ಈ ಹಿನ್ನೆಲೆ ಇಂದು ಬಸ್ಗಳನ್ನ ಸ್ವಚ್ಛಗೊಳಿಸಿ ಬಾಳೆಕಂಬ, ಹೂಗಳಿಂದ ಎಲ್ಲ ಬಸ್ಗಳಿಗೂ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊರೊನಾ ಮಹಾಮಾರಿ ನಮ್ಮನ್ನೆಲ್ಲ ಹಿಂಸಿಸುತ್ತಿದ್ದು, ಎಲ್ಲರಿಗೂ ತೊಂದರೆ ಕೊಡುತ್ತಿದೆ. ಈ ಕಾರಣಕ್ಕೆ ನಾವೆಲ್ಲರೂ ಸರಳವಾಗಿ ಹಬ್ಬವನ್ನು ಆಚರಿಸುವ ಅನಿರ್ವಾಯತೆ ಇದೆ. ತಾಯಿ ಚಾಮುಂಡೇಶ್ವರಿ ಹೇಗೆ ಮಹಿಷಾಸುರನ ವಧೆ ಮಾಡಿದ್ದಳೋ ಹಾಗೆಯೇ ಕೊರೊನಾವನ್ನು ಮೆಟ್ಟಿ ನಿಲ್ಲುವಂತೆ ಮಾಡಲಿ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಪ್ರಾರ್ಥಿಸಿದ್ದಾರೆ.