ಬೆಂಗಳೂರು: ವಿಶ್ವ ಮೂತ್ರಪಿಂಡ ದಿನದ ಹಿನ್ನೆಲೆ ಮೂತ್ರಪಿಂಡದ ರಕ್ಷಣೆ ಕುರಿತು ರಾಜಾಜಿನಗರದ ಖಾಸಗಿ ಆಸ್ಪತ್ರೆಯಿಂದ ಜನಜಾಗೃತಿ ವಾಕಥಾನ್ ಜಾಥ ಆಯೋಜಿಸಲಾಗಿತ್ತು. ಐದು ಅಡಿ ಉದ್ದದ ಮೂತ್ರಪಿಂಡದ ಮಾದರಿಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮೂತ್ರಪಿಂಡದ ಮಹತ್ವ, ರಕ್ಷಣೆ, ಮೂತ್ರಪಿಂಡ ವ್ಯಾಧಿಗಳು ಬಾರದಂತೆ ತಡೆಯುವ ವಿಧಾನ, ಮೂತ್ರಪಿಂಡ ಕಸಿ, ಮೂತ್ರ ಪಿಂಡ ಚಿಕಿತ್ಸೆಯಲ್ಲಿರುವ ಆಧುನಿಕ ವಿಧಾನಗಳ ಕುರಿತು ಅರಿವು ಮೂಡಿಸಲಾಯಿತು. ಜಾಗೃತಿ ವಾಕಥಾನ್ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ತಜ್ಞ ವೈದ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವ ಮೂತ್ರಪಿಂಡ ದಿನ ಆಚರಿಸಲಾಗುತ್ತದೆ. ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಅರಿವು ಮೂಡಿಸುವುದು, ಮೂತ್ರಪಿಂಡ ಸಮಸ್ಯೆಗಳು ಕಾಡದಂತೆ ನೋಡಿಕೊಳ್ಳುವುದು ಈ ದಿನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜಾಜಿನಗರದ ಖಾಸಗಿ ಆಸ್ಪತ್ರೆ ಮಾಹಿತಿ ಪ್ರಚಾರಾಂದೋಲನ ಅಭಿಯಾನ ಆರಂಭಿಸಿದೆ.
ಖಾಸಗಿ ಆಸ್ಪತ್ರೆಯ ವೈದ್ಯಕೀಯ ಗುಂಪಿನ ನಿರ್ದೇಶಕರು ಮತ್ತು ಮೂತ್ರಪಿಂಡ ತಜ್ಞ ಡಾ. ದಿಲೀಪ್ ರಂಗರಾಜನ್ ಮಾತನಾಡಿ, ಮೂತ್ರಪಿಂಡ ರಕ್ಷಣೆ ಕುರಿತು ಎಲ್ಲೆಡೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಕೋವಿಡ್-19 ಸೋಂಕಿನಿಂದ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿಡ್ನಿ ಸಂಬಂಧಿತ ರೋಗಿಗಳು ಬಾಧಿತರಾಗಿದ್ದು, ಇವರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು-ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಜೀವನ ಶೈಲಿಯಿಂದ ಮೂತ್ರಪಿಂಡ ಸಮಸ್ಯೆ ಕಾಡದಂತೆ ನೋಡಿಕೊಳ್ಳಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎಂದು ಹೇಳಿದರು.
ಮೂತ್ರಪಿಂಡ ತಜ್ಞ ಡಾ. ಎಸ್. ಪದ್ಮನಾಭನ್, ಇಂದಿನ ಜೀವನ ಶೈಲಿಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಾಮಾನ್ಯ ಸಮಸ್ಯೆಯಾಗಿದ್ದು, ಇಂತಹವರಲ್ಲಿ ಕಿಡ್ನಿ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡಗಳಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟಬೇಕಿದೆ. ಅನಗತ್ಯವಾಗಿ ಬಳಸುವ ನೋವು ನಿವಾರಕ ಮತ್ತು ರೋಗ ನಿರೋಧಕ ಔಷಧಿಗಳಿಂದ ಕಿಡ್ನಿಗಳಿಗೆ ತೊಂದರೆಯಾಗುತ್ತದೆ. ಈ ಬಗ್ಗೆಯು ಜನರಿಗೆ ಮಾಹಿತಿಯ ಕೊರತೆಯಿದೆ ಎಂದು ಹೇಳಿದರು.
ಮಕ್ಕಳ ಮೂತ್ರರೋಗ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, ಮೂತ್ರಪಿಂಡ ಸಮಸ್ಯೆ ತಡೆತಟ್ಟಲು ಶಿಕ್ಷಣ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಸ್ವಯಂ ಶಿಸ್ತಿನಿಂದ ಮೂತ್ರಪಿಂಡ ಆರೋಗ್ಯ ರಕ್ಷಿಸಿಕೊಳ್ಳಬಹುದು. ನಮ್ಮ ಆರೋಗ್ಯ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಕಿಡ್ನಿ ಸಮಸ್ಯೆ ಕಂಡು ಬಂದಲ್ಲಿ ಮೊದಲಿಗೆ ಮೂಲಭೂತವಾಗಿ ಅದನ್ನು ಒಪ್ಪಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಬುದ್ದಿವಂತಿಕೆಯ ಲಕ್ಷಣ ಎಂದರು.