ಬೆಂಗಳೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ತಥಾಗತ್ ಹೃದ್ರೋಗ ಆಸ್ಪತ್ರೆ ವಾಕಥಾನ್ ಮೂಲಕ ಅರಿವು ಮೂಡಿಸುವ ಅಭಿಯಾನ ನಡೆಸಿತು. ನಗರದ ಫ್ರೀಡಂ ಪಾರ್ಕ್ನಿಂದ ಮಂತ್ರಿ ಮಾಲ್ವರೆಗೂ ಕಾಲ್ನಡಿಗೆ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಭಿಯಾನಕ್ಕೆ ಫ್ರೀಡಂ ಪಾರ್ಕ್ನಲ್ಲಿ ಶಾಸಕಿ ಸೌಮ್ಯ ರೆಡ್ಡಿ, ತಥಾಗತ್ ಹಾರ್ಟ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಆರ್.ಮಹಾಂತೇಶ್ ವಾಕಥಾನ್ಗೆ ಚಾಲನೆ ನೀಡಿದರು. ಸೆಪ್ಟೆಂಬರ್ 29 ರಂದು ವಿಶ್ವದಾದ್ಯಂತ ವಿಶ್ವ ಹೃದಯ ದಿನವನ್ನು ಆಚರಿಸುಲಾಗುತ್ತದೆ. ಅದರ ಭಾಗವಾಗಿ ವಾಕಥಾನ್ ಹಾಗೂ ಉಚಿತವಾಗಿ ಹೃದಯ ಪರೀಕ್ಷೆ ಹಾಗೂ ಮಧುಮೇಹ ಪರೀಕ್ಷೆ ಮಾಡಲಾಗುತ್ತಿದೆ. ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವಿಸುವುದು, ಚೆನ್ನಾಗಿ ನೀರು ಕುಡಿಯುವುದು, ದಿನನಿತ್ಯ ವ್ಯಾಯಾಮ, ಧೂಮಪಾನ ನಿಲ್ಲಿಸುವುದು ಸೇರಿದಂತೆ ಕೆಲ ಸಣ್ಣ ಸಣ್ಣ ಬದಲಾವಣೆಗಳು ಪ್ರತಿ ನಿತ್ಯ ಮಾಡಿದರೆ ಸಾಕು ನಮ್ಮ ಆರೋಗ್ಯ ನಾವು ಕಾಪಾಡಬಹದು ಎಂಬ ಸಂದೇಶ ಸಾರಲಾಯಿತು.
ಈ ವೇಳೆ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ, ಯುವ ಪೀಳಿಗೆಯಲ್ಲೆ ಅತಿಹೆಚ್ಚು ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕು. ಜೀವನ ಕ್ರಮವನ್ನು ಉತ್ತಮಪಡಿಸಬೇಕು. ದೇಹ ದೇಗುಲ ಇದ್ದ ಹಾಗೆ. ಹೃದಯವೇ ಕೆಲಸ ನಿಲ್ಲಿಸಿಬಿಟ್ರೆ ಮನುಷ್ಯನಿಲ್ಲ. ಹೀಗಾಗಿ ವಾಯುಮಾಲಿನ್ಯವೂ ಹೃದಯದ ಸಮಸ್ಯೆಗೆ ಕಾರಣವಾಗುತ್ತೆ, ಪರಿಸರ ರಕ್ಷಣೆಯೂ ಜೊತೆಜೊತೆಗೆ ನಡೆಯಬೇಕು ಎಂದರು.
ತಥಾಗತ್ ಆಸ್ಪತ್ರೆ ಮುಖ್ಯಸ್ಥರಾದ ಡಾ. ಮಹಂತೇಷ್ ಹಿರೇಮಠ್ ಮಾತನಾಡಿ, ಪ್ರತೀವರ್ಷ ವಿಶ್ವ ಹೃದಯ ದಿನದಂದು ಈ ವಾಕಥಾನ್ ಆಯೋಜಿಸುತ್ತೇವೆ. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ದೇಶದಲ್ಲಿ ನೂರಕ್ಕೆ ನಲ್ವತ್ತು ಶೇಕಡಾದಷ್ಟು ಜನರು ಹೃದಯ ಸಂಬಂದಿ ಕಾಯಿಲೆಯಿಂದ ಮೃತಪಡುತ್ತಿದ್ದಾರೆ ಎಂದರು.
ಹೀಗಾಗಿ ಜನರಿಗೆ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿಗಾಗಿ ಈ ವಾಕಾಥಾನ್ ಆಯೋಜಿಸಿದ್ದು, ಮಂತ್ರಿಮಾಲ್ ಮುಂಭಾಗ ಉಚಿತವಾಗಿ ಹೃದಯದ ಪರೀಕ್ಷೆ ನಡೆಸಲಾಗುವುದು ಎಂದರು.