ಬೆಂಗಳೂರು: ರಾಜ್ಯದಲ್ಲಿ ಸಕ್ಕರೆ ಉದ್ಯಮ ನಿರೀಕ್ಷೆಗೂ ಮೀರಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಸಕ್ಕರೆ ಕಾರ್ಖಾನೆಗಳೂ ಸಹ ಒಳ್ಳೆಯ ಲಾಭದಲ್ಲಿವೆ. ಆದರೆ ಅವುಗಳಿಂದ ರೈತರಿಗೆ ಅಥವಾ ಸರ್ಕಾರಕ್ಕೆ ಏನೂ ಲಾಭವಾಗುತ್ತಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಮಾತನಾಡಿದ್ದು ಸಕ್ಕರೆ ಉದ್ಯಮದ ಕರಾಳ ಮುಖವನ್ನು ತೋರಿಸಿದೆ ಎಂದು ರಾಜ್ಯಸಭಾ ಸಂಸದ ಮತ್ತು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಡಾಡಿ, ಬುಧವಾರ ಬೆಳಗಾವಿಯಲ್ಲಿ ಸಚಿವರು ಹೇಳಿದ ಪ್ರಕಾರ, ಕಬ್ಬು ಬೆಳೆಗಾರರಿಗೆ ರಾಜ್ಯದಲ್ಲಿ ಎಲ್ಲ ಕಾರ್ಖಾನೆಗಳು 400 ಕೋಟಿ ರೂ. ಬಾಕಿ ಕೊಡಬೇಕಾಗಿದೆ. ಇದು ಬೆಳೆಗಾರ ರೈತರ ಶೋಷಣೆ. ರೈತ ಕಾರ್ಖಾನೆಗೆ ಕಬ್ಬು ನೀಡುವಾಗ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ. ಸರಿಯಾದ ಲೆಕ್ಕಪತ್ರವಿಲ್ಲದೇ ಸಕ್ಕರೆ ಮತ್ತು ಅದರ ಉಪ ಉತ್ಪಾದನೆಗಳಲ್ಲಿ ಬಂದ ಲಾಭದಲ್ಲಿ ರೈತರಿಗೆ ಪಾಲು ಕೂಡ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಮಾಲೀಕರುಗಳನ್ನು ಕೇವಲ ಕಾರ್ಖಾನೆ ಮಾಲೀಕರಾಗಿ ನೋಡಬೇಕೇ ಹೊರತು, ಯಾವುದೇ ಪಕ್ಷ ಅಥವಾ ಯಾವುದೇ ಪಕ್ಷದ ಸರ್ಕಾರ ಅವರ ಬೆನ್ನಿಗೆ ನಿಲ್ಲದೇ ನಾಡಿಗೆ ಅನ್ನ ನೀಡುವ ರೈತಾಪಿ ವರ್ಗದ ಪರವಾಗಿ ಬೆಂಬಲಿಸಬೇಕು. ತೂಕದ ಯಂತ್ರಗಳಲ್ಲಿನ ಮೋಸ ತಡೆಯುವ ದೃಷ್ಠಿಯಿಂದ ಸರ್ಕಾರ ಕಾರ್ಖಾನೆ ಎದುರಿಗೆ ತೂಕದ ಯಂತ್ರದ ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದರೆ ಅದರ ನಿರ್ವಹಣೆಯನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪಕ್ಷಾತೀತವಾಗಿ ಈ ಸಮಸ್ಯೆಯನ್ನು ಎದುರಿಸಬೇಕಾದ ಅಗತ್ಯವಿದೆ. ಸಕ್ಕರೆ ಸಚಿವರು ಮೂಲತಃ ರೈತರಾಗಿರುವುದರಿಂದ ಪ್ರಾಮಾಣಿಕವಾಗಿ ಬಗೆಹರಿಸಬಹುದೆಂಬ ನಿರೀಕ್ಷೆ ನಾಡಿನ ರೈತರದ್ದು. ಈ ಬಗ್ಗೆ ಗಂಭೀರ ಚಿಂತನೆಯಾಗಲಿ ಎಂದು ಸಂಸದ ಈರಣ್ಣ ಕಡಾಡಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೆಂಡತಿಗೆ ಫ್ರೀ ಕೊಟ್ಟು ಗಂಡನ ಕಿಸೆಯಿಂದ ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ
ಸರ್ಕಾರಿ ಕಾರ್ಖಾನೆಯಲ್ಲಿ ತೂಕದ ಮಷಿನ್ ಅಳವಡಿಸುವ ಚಿಂತನೆ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಆರೋಪವಿರುವ ಹಿನ್ನೆಲೆಯಲ್ಲಿ ನಾವೇ ಇಲಾಖೆಯಿಂದ ತೂಕದ ಮಷಿನ್ ಹಾಕುವ ಬಗ್ಗೆ ಚಿಂತನೆ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ನಿನ್ನೆ (ಜೂನ್ 21-2023 ) ಹೇಳಿದ್ದರು. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಶೀಘ್ರವೇ ಸಕ್ಕರೆ ಕಾರ್ಖಾನೆಗಳ ಸಭೆ ಕರೆಯುತ್ತೇವೆ. ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಪರಿಸ್ಥಿತಿ ಅನಿವಾರ್ಯವಾದರೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಹಾಕಲೇಬೇಕಾಗುತ್ತೆ ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ : ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಮಷಿನ್ ಅಳವಡಿಸಲು ಚಿಂತನೆ: ಸಚಿವ ಶಿವಾನಂದ ಪಾಟೀಲ್