ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ವಾಹನಗಳ ಬೇಡಿಕೆಯು, ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ತೆರವುಗೊಳಿಸಿದ ನಂತರ ಮಂದಗತಿಯಲ್ಲಿದ್ದ ಹೊಸ ವಾಹನ ಮಾರಾಟವು, ಇದೀಗ ಏರಿಕೆಯಾಗುತ್ತಿದೆ. ಇದೀಗ ಹಬ್ಬಗಳ ಸಂಭ್ರಮದಲ್ಲಿ ವಾಹನ ಖರೀದಿ ಭರಾಟೆ ಶುರುವಾಗಿದೆ.
ಬಹುತೇಕ ಜನರು ಸಾರ್ವಜನಿಕ ಸಾರಿಗೆ ಬಳಕೆಯಿಂದ ಹಿಂದೆ ಸರಿದು, ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಲಾಕ್‌ಡೌನ್‌ದಿಂದ ಆರ್ಥಿಕ ಸ್ಥಿತಿ ಬಿಗಡಾಯಿಸಿದ್ದರಿಂದ ಜನ ಹೊಸ ವಾಹನಗಳ ಖರೀದಿಗೆ ಮುಂದಾಗುವುದಿಲ್ಲ ಎಂದೇ ಅಟೋಮೊಬೈಲ್ ಕ್ಷೇತ್ರದವರು ಅಂದುಕೊಂಡಿದ್ದರು. ಆದರೆ ಹೊಸ ಕಾರು, ಬೈಕ್ ಖರೀದಿಗೆ ಹಣ ಕೂಡಿಟ್ಟವರು, ಬ್ಯಾಂಕ್ ಸಾಲ ಪಡೆದುಕೊಂಡವರು ಶೋ ರೂಂನಿಂದ ವಾಹನ ಖರೀದಿಸುತ್ತಿದ್ದಾರೆ.
ಬೆಂಗಳೂರಿನ ಯಶವಂತಪುರ, ರಾಜಾಜಿನಗರ, ಎಲೆಕ್ಟಾನಿಕ್ ಸಿಟಿ ಆರ್.ಟಿ.ಒ ಕಚೇರಿಗಳಲ್ಲಿ ಹೆಚ್ಚಾಗಿ ವಾಹನ ನೋಂದಣಿಯಾಗುತ್ತಿವೆ. ಈ ವರ್ಷ ಖರೀದಿ ಮಾಡಿ ನೋಂದಣಿ ಮಾಡಿದ ವಾಹನಗಳ ವಿವರ ನೋಡುವುದಾದರೆ, ದ್ವಿಚಕ್ರ ವಾಹನ ಮೇ ತಿಂಗಳಲ್ಲಿ 980, ಜೂನ್ 1033, ಜುಲೈ 1100, ಆಗಸ್ಟ್ 1600, ಸೆಪ್ಟೆಂಬರ್ 1805, ಅಕ್ಟೋಬರ್ 2023 ವಾಹನಗಳು ಆರ್ಟಿಒ ಕಚೇರಿಯಲ್ಲಿ ರಿಜಿಸ್ಟರ್ ಆಗಿವೆ. ಹಾಗೆ ನಾಲ್ಕು ಚಕ್ರದ ವಾಹನಗಳು ಮೇ ತಿಂಗಳಲ್ಲಿ 2428, ಜೂನ್ 3140, ಜುಲೈ 3600, ಆಗಸ್ಟ್ 4000, ಸೆಪ್ಟೆಂಬರ್ 3899 ಹಾಗೂ ಅಕ್ಟೋಬರ್ನಲ್ಲಿ 4800 ವಾಹನಗಳು ರಿಜಿಸ್ಟರ್ ಆಗಿವೆ.
ಇನ್ನು ಮಂಗಳೂರಿನಲ್ಲಿ ಕಳೆದ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ 1,268 ಹೊಸ ಕಾರುಗಳು ಖರೀದಿಯಾಗಿದ್ದವು. ಆದರೆ ಈ ವರ್ಷ ಕೊರೊನಾ ಬಿಸಿ ನಡುವೆಯೂ 1,450 ಹೊಸ ಕಾರುಗಳ ಖರೀದಿ ನಡೆದಿದೆ. ಇದೀಗ ನವರಾತ್ರಿ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಹೊಸ ವಾಹನಗಳ ಖರೀದಿಗೆ ಆಫರ್ ಇದ್ದು, ಆದ್ದರಿಂದ ಕೊಂಡುಕೊಳ್ಳುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ.
ಇನ್ನು ಮೈಸೂರು ನಗರದಲ್ಲಿ ಎರಡು ಆರ್.ಟಿ.ಒ ಕಚೇರಿ ಹಾಗೂ ಹುಣಸೂರು ಪಟ್ಟಣದಲ್ಲಿ ಒಂದು ಆರ್.ಟಿ.ಒ ಕಚೇರಿ ಇದ್ದು, ಅಂದಾಜು ಪ್ರತಿ ದಿನ 350 ಹೊಸ ದ್ವಿಚಕ್ರ ವಾಹನ 50 ಕಾರ್ಗಳು ಈ ಹಬ್ಬದ ಸಂದರ್ಭದಲ್ಲಿ ನೋಂದಣಿಯಾಗುತ್ತಿವೆ. ಇದೀಗ ಹೊಸ ವಾಹನಗಳನ್ನು ಕೊಂಡುಕೊಳ್ಳುವ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಾಗಿ ನಗರ ಪ್ರದೇಶದಲ್ಲಿ ಕಾರ್ಗಳ ಖರೀದಿ ಜೋರಾಗಿದೆ. ಇನ್ನು ಗ್ರಾಮಾಂತರ ಪ್ರದೇಶದ ಜನರು ಹೊಸ ದ್ವಿಚಕ್ರ ವಾಹನಗಳ ಖರೀದಿ ಮಾಡುತ್ತಿದ್ದು, ಇದರ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಂಖ್ಯೆಯು ಸಹ ಈಗ ಹೆಚ್ಚಾಗಿದೆ.
ಕೊರೊನಾ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋಮೊಬೈಲ್ ಕ್ಷೇತ್ರ, ಇದೀಗ ವಾಹನ ಮಾರಾಟ ಪ್ರಮಾಣ ಹೆಚ್ಚಿಸಿದೆ. ಬಹುತೇಕ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡು ಬಂದಿದ್ದು, ಎಲ್ಲೆಡೆ ನೂರಾರು ವಾಹನಗಳ ಬುಕ್ಕಿಂಗ್ ನಡೆಯುತ್ತಿದೆ.