ಹಾವೇರಿ: ಸಕ್ಕರೆಯ ಆಣದಿಂದ ಕಟ್ಟಿಗೆಯ ಅಚ್ಚುಗಳಲ್ಲಿ ತಯಾರಾಗ್ತಿರೋ ಬೊಂಬೆಗಳು. ಗಣೇಶ, ಲಕ್ಷ್ಮಿ, ಆನೆ, ಕುದುರೆ, ಒಂಟೆ, ಬಸವಣ್ಣ, ಗಣೇಶ, ಆಂಜನೇಯ ಹೀಗೆ ತರಹೇವಾರಿ ಬೊಂಬೆಗಳು ತಯಾರಾಗುತ್ತಿರುವುದು ಗೌರಿ ಹುಣ್ಣಿಮೆಗಾಗಿ.
ಹೌದು, ಉತ್ತರ ಕರ್ನಾಟಕ ಭಾಗದಲ್ಲಿ ಗೌರಿ ಹುಣ್ಣಿಮೆ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಬೊಂಬೆಗಳನ್ನ ಒಯ್ದು ದೇವರಿಗೆ ಬೆಳಗಿದ ಅದನ್ನು ಮನೆಮಂದಿಗೆಲ್ಲಾ ಹಂಚಿ ತಿನ್ನುತ್ತಾರೆ. ಯಾಕಂದ್ರೆ ಈ ಬೊಂಬೆಗಳು ತಯಾರಾಗುವುದು ಸಕ್ಕರೆಯಿಂದ.
ಬೊಂಬೆ ತಯಾರಿಸುವುದು ಹೀಗೆ.. ಪ್ರತಿವರ್ಷ ಗೌರಿ ಹುಣ್ಣಿಮೆ ಪೂರ್ವದ ಒಂದು ವಾರ ಕಾಲ ಮಾರುಕಟ್ಟೆಯಲ್ಲಿ ಬೊಂಬೆಗಳ ಮಾರಾಟ ಭರಾಟೆಯಿಂದ ನಡೆಯುತ್ತೆ. ಸಕ್ಕರೆ ಬೊಂಬೆ ತಯಾರಕರು ವಾರಗಟ್ಟಲೆ ಬೊಂಬೆ ತಯಾರು ಮಾಡೊದ್ರಲ್ಲಿ ಬ್ಯುಜಿ ಆಗಿರ್ತಾರೆ. ಪ್ರತಿದಿನ ಐದಾರು ಕ್ವಿಂಟಲ್ ಸಕ್ಕರೆಯಿಂದ ಬೊಂಬೆಗಳನ್ನ ತಯಾರಿಸಿ ಮಾರಾಟ ಮಾಡ್ತಾರೆ. ಸಕ್ಕರೆ, ಲಿಂಬೆ ಹಣ್ಣಿನ ರಸ, ಹಲವು ಬಣ್ಣ ಬಳಸಿ ಸಕ್ಕರೆ ಬೊಂಬೆಗಳನ್ನ ತಯಾರಿಸ್ತಾರೆ. ವಾರಗಟ್ಟಲೆ ಕಟ್ಟಿಗೆಯ ಅಚ್ಚುಗಳನ್ನಿಟ್ಟು ಸಕ್ಕರೆ ಬೊಂಬೆ ತಯಾರಿಸುತ್ತಾರೆ.
ಗಣೇಶ ಆನೆ, ಒಂಟೆ, ಕುದುರೆ, ಗಣೇಶ, ಬಸವಣ್ಣ ಹೀಗೆ ತರಹೇವಾರಿ ಆಕೃತಿಗಳ ಸಕ್ಕರೆ ಬೊಂಬೆ ತಯಾರಿಸುತ್ತಾರೆ. ಹೀಗೆ ತಯಾರಿಸಿದ ಬೊಂಬೆಗಳ ಜೊತೆ ಕೋಲುಂಬರ, ದಂಡಿ ಮಾರಾಟ ಮಾಡಲಾಗುತ್ತೆ. ಜನರು ತಮ್ಮ ಮನೆಯಲ್ಲಿನ ಹೆಣ್ಣು ಮಕ್ಕಳಿಗಾಗಿ ವಿವಿಧ ಆಕಾರದ ಬೊಂಬೆಗಳನ್ನ ಖರೀದಿಸುತ್ತಾರೆ.
ಗೌರಿ ಹುಣ್ಣಿಮೆ ಮಾರುಕಟ್ಟೆಗೆ ಕಲರ್ ಕಲರ್ ಸಕ್ಕರೆ ಬೊಂಬೆಗಳು ಲಗ್ಗೆ ಇಟ್ಟಿದ್ದು, ಜನರು ಸಕ್ಕರೆ ಬೊಂಬೆಗಳನ್ನು ಖರೀದಿಸುತ್ತಾರೆ. ವಿಶೇಷವಾಗಿ ಮದುವೆ ನಿಶ್ಚಯವಾದವರು ಹೆಣ್ಣಿಗೆ ಐದು, ಹತ್ತು ಕೆ.ಜಿ ಗಟ್ಟಲೆ ಸಕ್ಕರೆ ಬೊಂಬೆಗಳ ಆರತಿಗಳನ್ನ ಕೊಡೋ ಸಂಪ್ರದಾಯವಿದೆ. ಸಕ್ಕರೆ ಬೊಂಬೆಗಳ ಜೊತೆ ಹೊಸ ಸೀರೆ, ಕೋಲುಂಬರ, ದಂಡಿ ಕೊಡ್ತಾರೆ. ನಂತರ ಹೀಗೆ ತಯಾರಾದ ಸಕ್ಕರೆ ಬೊಂಬೆಗಳನ್ನ ಗೌರಿ ಹುಣ್ಣಿಮೆಯ ದಿನ ಮಹಿಳೆಯರು ತಟ್ಟೆಯಲ್ಲಿ ಇಟ್ಕೊಂಡು ಸಮೀಪದ ದೇವಸ್ಥಾನಕ್ಕೆ ಹೋಗಿ ಆರತಿ ಬೆಳಗೋದು ಗೌರಿ ಹುಣ್ಣಿಮೆ ಹಬ್ಬದ ವಿಶೇಷ.
ಈಗಾಗಲೆ ಗೌರಿ ಹುಣ್ಣಿಮೆಗಾಗಿ ಹಳದಿ, ಕೆಂಪು, ನೀಲಿ, ಹಸಿರು ಹೀಗೆ ಬಣ್ಣ ಬಣ್ಣದ ಕಂಗೊಳಿಸೋ ಸಕ್ಕರೆ ಬೊಂಬೆಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಜನರು ಸಕ್ಕರೆ ಬೊಂಬೆಗಳ ಖರೀದಿಯಲ್ಲಿ ತೊಡಗಿದ್ದಾರೆ. ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸಕ್ಕರೆಯಿಂದ ತಯಾರಿಸಿದ ಬೊಂಬೆಗಳನ್ನ ಖರೀದಿಸಿ ಆರತಿ ಬೆಳಗ್ತಾರೆ. ನಂತರ ಮನೆಯಲ್ಲಿನ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಸಕ್ಕರೆ ಬೊಂಬೆಗಳನ್ನ ತಿಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಕೆ.ಜಿಗೆ 100ರಿಂದ 150 ರೂಪಾಯಿವರೆಗೆ ಸಕ್ಕರೆ ಬೊಂಬೆಗಳು ಮಾರಾಟ ಆಗ್ತಿವೆ. ಈಗ ಜನರು ಸಕ್ಕರೆ ಬೊಂಬೆಗಳನ್ನ ಖರೀದಿಸಿಟ್ಟುಕೊಂಡು ಗೌರಿ ಹುಣ್ಣಿಮೆ ದಿನ ತಟ್ಟೆಯಲ್ಲಿಟ್ಟು ದೇವರಿಗೆ ಬೆಳಗಿ ಹಬ್ಬದ ಸಂಭ್ರಮ ಆಚರಿಸ್ತಾರೆ. ಒಟ್ಟಿನಲ್ಲಿ ಈಗ ಮಾರುಕಟ್ಟೆಗಳು ಸಕ್ಕರೆ ಬೊಂಬೆಗಳಿಂದ ಕಲರ್ ಕಲರ್ ಆಗಿ ಕಂಗೊಳಿಸ್ತಿವೆ. ಇನ್ನು, ಹೊಸದಾಗಿ ಮದುವೆ ನಿಶ್ಚಯವಾದವರು ಗೌರಿ ಹುಣ್ಣಿಮೆಯ ನಂತರವೂ ಕನ್ಯೆಯರಿಗೆ ಸಕ್ಕರೆ ಗೊಂಬೆ, ಕೋಲುಂಬರ ಮತ್ತು ದಂಡಿ ಒಯ್ದು ಉಡಿ ತುಂಬುವ ಸಂಪ್ರದಾಯ ತಿಂಗಳುಗಟ್ಟಲೇ ಇರುತ್ತೆ.
ಕಟ್ಟಿಗೆಯ ಅಚ್ಚುಗಳಲ್ಲಿ ಕುದಿಸಿದ ಸಕ್ಕರೆ ಮತ್ತು ಬಣ್ಣದ ಆಣವನ್ನು ಹಾಕಿ ವಿವಿಧ ದೇವರ ಆಕಾರಗಳನ್ನು ಮಾಡಲಾಗುತ್ತದೆ. ಆಹಾರ ಪದಾರ್ಥಗಳಿಗೆ ಬಳಸುವ ಬಣ್ಣಗಳನ್ನೇ ಬಳಕೆ ಮಾಡಲಾಗುತ್ತದೆ. ಜಿಲ್ಲೆಯ ವಿವಿಧ ಪಟ್ಟಣಗಳು ಸೇರಿ ಬೆಂಗಳೂರುವರೆಗೂ ಈ ಸಕ್ಕರೆ ಆರತಿಗಳ ಮಾರಾಟ ನಡೆಯುತ್ತೆ ಎನ್ನುತ್ತಾರೆ ಬೊಂಬೆ ತಯಾರಕರಾದ ಬಾಬುಸಾಬ್ ಮತ್ತು ರಾಜಾಸಾಬ್.
ಇದನ್ನೂ ಓದಿ: