ಬೆಂಗಳೂರು: ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಒತ್ತಾಯಿಸಿ ಸೋಮವಾರ ರಾಜಧಾನಿಯಲ್ಲಿ ಆಟೋ ಸೇವೆ ಬಂದ್ ಆಗಲಿದೆ. ನಗರದಲ್ಲಿ ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಪ್ರತಿಭಟನೆಗೆ ಇಳಿದಿದ್ದಾರೆ. ಇಂದಿನಿಂದ ಸಾಂಕೇತಿಕವಾಗಿ ಆಟೋ ಚಾಲಕರು ತಮ್ಮ ವಾಹನಗಳಿಗೆ ಕಪ್ಪುಬಾವುಟ ಕಟ್ಟಿ ಪ್ರತಿಭಟನೆ ನಡೆಸಲಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಸೋಮವಾರ ಆಟೋ ಸೇವೆ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಸಮಸ್ಯೆ ಏನು?: ಆಟೋ ಚಾಲಕರು ಹಾಗೂ ಬೈಕ್ ಟ್ಯಾಕ್ಸಿ ಕಂಪನಿಗಳ ಮಧ್ಯೆ ಹಲವು ತಿಂಗಳಿಂದಲೂ ಹಗ್ಗಜಗ್ಗಾಟ ನಡೆಯುತ್ತಿದೆ. "ರಾಪಿಡೋ ಬೈಕ್ ಸಂಚಾರದಿಂದ ಆಟೋ ಚಾಲಕರಿಗೆ ಬಿಸ್ನೆಸ್ ಆಗುತ್ತಿಲ್ಲ. ತಮ್ಮ ಪಾಲಿನ ಗ್ರಾಹಕರು ಸುಲಭವಾಗಿ ವೈಟ್ ಬೋರ್ಡ್ ಬೈಕ್ ಕಂಪನಿಗಳಿಗೆ ಹೋಗುತ್ತಿದ್ದಾರೆ. ನ್ಯಾಯಬದ್ದವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ವಾಮಮಾರ್ಗದಿಂದ ಕಾನೂನುಬಾಹಿರವಾಗಿ ಬೈಕ್, ಟ್ಯಾಕ್ಸಿಗಳು ಸೇವೆ ನೀಡುತ್ತಿರುವುದು ಎಷ್ಟು ಸರಿ?. ಹೀಗಾಗಿ ಹೀಗೆ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ಆಟೋ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ಇಲಾಖೆಯ ಟ್ಯಾಕ್ಸಿ, ಆಟೋ, ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ
ಇದಕ್ಕೂ ಮುನ್ನ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆದರ್ಶ ಆಟೋ ಅಂಡ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ರಾಜ್ಯಾಧ್ಯಕ್ಷ ಎಂ.ಮಂಜುನಾಥ್, "ನಗರದಲ್ಲಿ ಆಟೋರಿಕ್ಷಾ ಸೇವೆ ಸುಮಾರು 60 ವರ್ಷಗಳಿಂದ ಇದೆ. ಬಿಎಂಟಿಸಿಯ ನಂತರ ಬೆಂಗಳೂರು ನಗರದಲ್ಲಿ ನಿತ್ಯ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಟೋಗಳಿಂದ ಸಾರಿಗೆ ಸೇವೆ ಲಭ್ಯವಾಗುತ್ತಿದೆ. ಬೆಂಗಳೂರಿನಲ್ಲಿ ಆಟೋ ರಿಕ್ಷಾ ಬಹುದೊಡ್ಡ ಉದ್ಯಮವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶ ಕೊಟ್ಟಿದೆ" ಎಂದು ಹೇಳಿದರು.
"ಮುಖ್ಯವಾಗಿ ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆ ನೀಡುವ ಅಗ್ರಿಗೇಟರ್ ಕಂಪನಿಗಳು ಹೊಸದಾಗಿ ಸಾರಿಗೆ ಕ್ಷೇತ್ರಕ್ಕೆ ಬಂದು, ಬೇಕಾಬಿಟ್ಟಿ ಪ್ರಯಾಣಿಕರಿಗೆ ಆಫರ್ಗಳನ್ನು ಹಾಗೂ ಚಾಲಕರಿಗೆ ಇನ್‌ಸೆಂಟಿವ್ ಹೆಸರಿನಲ್ಲಿ ಆಮಿಷಗಳನ್ನೊಡ್ಡುತ್ತಿವೆ. ಇದರಿಂದಾಗಿ ಸಣ್ಣ ವ್ಯಾಪಾರಸ್ಥರು ಹಾಗೂ ಕೈಗಾರಿಕೆಗಳನ್ನು ಒಕ್ಕಲೆಬ್ಬಿಸಿ, ರಾಜ್ಯದ ಆರ್ಥಿಕ ವ್ಯವಸ್ಥೆ ಹಾಗೂ ಸರಬರಾಜು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ" ಎಂದರು.
"ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಚುನಾವಣೆಗೂ ಮುನ್ನ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸದಿದ್ದಲ್ಲಿ ಚಾಲಕರು ಚುನಾವಣೆ ಬಹಿಷ್ಕರಿಸುವಂತೆ ಸಂಘಟನೆಗಳು ಕರೆ ನೀಡಬೇಕಾಗುತ್ತದೆ" ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರ‍್ಯಾಪಿಡೋ ಕ್ಯಾಪ್ಟನ್ ಮೇಲೆ ಆಟೋ ಚಾಲಕನ ದರ್ಪ: ಪ್ರಕರಣ ದಾಖಲು