ಬೆಂಗಳೂರು: ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ರಾಜ್ಯದ ಬಹುನಿರೀಕ್ಷಿತ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪವಾದ ಈ ಪ್ರವಾಸ ಯೋಜನೆಗೆ ಸರ್ಕಾರ ಆದೇಶ ಹೊರಡಿಸಿದ್ದು, ದೇವಾಲಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾಮ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ವಾರಣಾಸಿಯ ಪುರಾತನ ಕಾಶಿಯ ಶ್ರೀ ವಿಶ್ವನಾಥ ಮಂದಿರವನ್ನು ವಿಶಿಷ್ಟ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಮೂಲಕ ಐತಿಹಾಸಿಕ ಕಾಶಿಗೆ ‘ದಿವ್ಯಕಾಶಿ-ಭವ್ಯಕಾಶಿ’ ಎಂಬ ಅಭಿದಾನ ದೊರೆಯುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಯಾತ್ರಾರ್ಥಿಗಳು ಭವ್ಯಕಾಶಿಗೆ ಭೇಟಿ ನೀಡಿ ಶ್ರೀ ವಿಶ್ವನಾಥನ ದರ್ಶನವನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
![ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರದಿಂದ ಅಧೀಕೃತ ಆದೇಶ](https://etvbharatimages.akamaized.net/etvbharat/prod-images/kn-bng-03-minister-shashikala-jollestatement-script-7208083_19042022190542_1904f_1650375342_608.jpg)
ಇದನ್ನೂ ಓದಿ: ಅರ್ಥಶಾಸ್ತ್ರದಲ್ಲಿ ಪದವಿ ಪಡೆದ್ರೂ ಸಿಗದ ಕೆಲಸ, ಚಹಾ ಅಂಗಡಿಯಲ್ಲಿ ಬದುಕು ಕಟ್ಟಿಕೊಂಡ ಪದವೀಧರೆ!
ಕಾಶಿಯಾತ್ರೆ ಯೋಜನೆಯನ್ವಯ ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಬಹುದಾಗಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ ಈ ಯೋಜನೆಯನ್ವಯ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದಿರುವ ಅವರು, ಈ ಕುರಿತಂತೆ ಸರ್ಕಾರದ ಆದೇಶ ಹೊರಡಿಸಲಾಗಿದ್ದು, ಶೀಘ್ರದಲ್ಲಿಯೇ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದಿದ್ದಾರೆ.
ಪಂಡರಾಪುರದಲ್ಲಿ ಅತಿಥಿ ಗೃಹ ನಿರ್ಮಾಣ: ನೆರೆಯ ಮಹಾರಾಷ್ಟ್ರದ ಪಂಡರಾಪುರ ಶ್ರೀಕ್ಷೇತ್ರಕ್ಕೆ ರಾಜ್ಯದಿಂದ ಸಾವಿರಾರು ಮಂದಿ ಭಕ್ತಾದಿಗಳು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಈ ಭಕ್ತಾದಿಗಳ ಅನುಕೂಲಕ್ಕಾಗಿ ಪಂಡರಾಪುರದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.