ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ವರದಿಯನ್ನು ಡಿಜಿ ಐಜಿಪಿ ನೀಲಮಣಿ ರಾಜುಗೆ ಸಲ್ಲಿಕೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಭಾಸ್ಕರ್ ರಾವ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ತಮ್ಮ ಪೋನ್ ಕರೆಯನ್ನು ಕದ್ದಾಲಿಸಲಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸಬೇಕು ಎಂದು ಖುದ್ದು ಭಾಸ್ಕರ್ ರಾವ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜುಗೆ ದೂರು ಸಲ್ಲಿಸಿದ್ದರು. ಬಳಿಕ ಡಿಜಿ ಐಜಿಪಿ ಸೂಚನೆ ಮೇರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಸಿಸಿಬಿ ಡಿಸಿಪಿ ರವಿ ಅವರು ತನಿಖೆ ನಡೆಸಿದ್ದರು. ಈ ತನಿಖೆಯ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅವರಿಗೆ ಡಿಜಿ ಐಜಿಪಿ ನೀಲಮಣಿ ರಾಜುಗೆ ಸಲ್ಲಿಸಲಾಗಿದೆ.
ತನಿಖೆ ವರದಿಯಲ್ಲಿ ಕೆಲ ಅಧಿಕಾರಿಗಳ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ. ಆ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಲಿದ್ದು, ವರದಿ ಆಧರಿಸಿ ಡಿಜಿ ಐ ಜಿಪಿ ನೀಲಮಣಿರಾಜು ಸದ್ಯದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.