ಆನೇಕಲ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿಕೆ. ಸೆಂಟ್ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಪಟಾಕಿ ಖರೀದಿಸಲು ತನ್ನ ಸ್ನೇಹಿತನೊಂದಿಗೆ ವೆಂಕಟೇಶ್ ಅಂಗಡಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂಡಿತ್ತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದರು. ಜೊತೆಯಲ್ಲಿದ್ದ ಸ್ನೇಹಿತನ ಬೆನ್ನು, ತಲೆ ಕೈಕಾಲುಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ ವೆಂಕಟೇಶ್ ಬಾಡಿ ಬಿಲ್ಡರ್ ಸಹ ಆಗಿದ್ದರು. ಯಾರದೋ ಕಾರ್ಯಕ್ರಮಕ್ಕೆ ಪಟಾಕಿ ತರಲು ಅಂಗಡಿ ತೆರಳಿದ್ದ ವೇಳೆ ದುರಂತ ನಡೆದು ಜೀವ ಕಳೆದುಕೊಂಡಿದ್ದಾರೆ. ಪಟಾಕಿ ದುರಂತ ಪ್ರಕರಣದಲ್ಲಿ 12 ಜನ ಸಜೀವ ದಹನವಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೂವರು ಮೃತಪಟ್ಟಿದ್ದರು. ಇಂದು ವೆಂಕಟೇಶ್ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣಬಿಟ್ಟಿದ್ದಾರೆ.
ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಪರಿಹಾರ ಘೋಷಿಸಿವೆ. 'ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ಸಾವಿರ 5 ಲಕ್ಷ ರೂ ಪರಿಹಾರ ಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಹಾಗೆಯೇ ತಮಿಳುನಾಡು ಸರ್ಕಾರವು ಮೃತರ ಕುಟುಂಬಸ್ಥರಿಗೆ 3 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಾಧಾರಾಣ ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ವಿತರಿಸಲಾಗುವುದು ಎಂದು ಸಿಎಂ ಎಂ.ಕೆ.ಸ್ಟಾಲಿನ್ ಘೋಷಿಸಿದ್ದರು.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಕರ್ನಾಟಕ, ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ
ಅತ್ತಿಬೆಲೆ ದುರಂತ ಸಿಐಡಿ ತನಿಖೆಗೆ: ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಕುರಿತು ತನಿಖೆಗೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಲಾಗಿದೆ. ಅಂತೆಯೇ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್, ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಶ್ರೀನಿವಾಸ್, ಮೂವರು ಇನ್ಸ್ಪೆಕ್ಟರ್ ಅತ್ತಿಬೆಲೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. . ಜೊತೆಗೆ ಪಟಾಕಿ ಅಂಗಡಿ ಪರವಾನಗಿ ಹೊಂದಿದ ರಾಮಸ್ವಾಮಿರೆಡ್ಡಿಯಿಂದ ಕೂಡ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ತಮಿಳುನಾಡಿನಿಂದ ಕೆಲಸಕ್ಕೆ ಬಂದವರ ದುರ್ಮರಣ: ಮೃತರಲ್ಲಿ ಬಹುಪಾಲು ತಮಿಳುನಾಡಿನ ಮೂಲದವರೇ ಆಗಿದ್ದಾರೆ. ಅಷ್ಟೇ ಅಲ್ಲ ತಮಿಳುನಾಡಿನ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ದುರಂತಕ್ಕೆ ಬಲಿಯಾಗಿದ್ದಾರೆ. ದೀಪಾವಳಿ ವೇಳೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಟಾಕಿ ಗೋದಾಮಿಗೆ ಕೆಲಸಕ್ಕೆ ಬಂದಿದ್ದರು. ಆದರೆ ಸ್ಫೋಟ ಸಂಭವಿಸಿ ದುರಂತ ನಡೆದಿದೆ. ಕೆಲಸಕ್ಕೆ ಬಂದಿದ್ದವರು ಸಜೀವ ದಹನವಾಗಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಅತ್ತಿಬೆಲೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ಪಟಾಕಿ ಗೋದಾಮಿನ ಮಾಲೀಕ ರಾಮಸ್ವಾಮಿ ರೆಡ್ಡಿ ಮತ್ತು ಅವರ ಪುತ್ರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ದುರಂತ... ತಮಿಳುನಾಡಿನ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ: 7 ಮಂದಿ ದಾರುಣ ಸಾವು