ಆನೇಕಲ್: ನಿಷೇಧಿತ ಕ್ಯಾಟ್ ಫಿಶ್ ಸಾಕಾಣೆ ಮಾಡುತ್ತಿದ್ದ ಹೊಂಡಗಳ ಮೇಲೆ ಅತ್ತಿಬೆಲೆ ಪೊಲೀಸರು ಹಾಗೂ ತಹಶೀಲ್ದಾರ್ ಸಿ.ಮಹದೇವಯ್ಯ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಜೆಸಿಬಿಗಳ ಮೂಲಕ ಧ್ವಂಸ ಮಾಡಿದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಲಬೆಲೆಯಲ್ಲಿ ನಡೆದಿದೆ.
ವೆಂಕಟೇಶ ಎಂಬುವವರು ತಮ್ಮ ಜಮೀನಿನಲ್ಲಿ ಮೂರು ಹೊಂಡಗಳನ್ನು ನಿರ್ಮಾಣ ಮಾಡಿ ಹಲವಾರು ವರ್ಷಗಳಿಂದ ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ವೆಂಕಟೇಶ್ ಹಾಗೂ ಆತನ ಪುತ್ರನನ್ನು ಬಂಧಿಸಿ ಹೊಂಡಗಳಲ್ಲಿನ ಮೀನಿನ ಸಮೇತ ನೀರನ್ನು ಜಿಸಿಬಿಗಳ ಮೂಲಕ ಹೊರ ಬಿಟ್ಟಿದ್ದಾರೆ. ಇಂಡ್ಲ ಬೆಲೆಯ ಸರ್ವೇ ನಂಬರ್ 141 ಹಾಗೂ 142ರಲ್ಲಿ ಅಕ್ರಮವಾಗಿ ಮೂರ್ನಾಲ್ಕು ವರ್ಷಗಳಿಂದ ಮೀನು ಸಾಕಣೆ ಮಾಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಹೊಂಡಗಳನ್ನು ಧ್ವಂಸ ಮಾಡಿ ಬಂದರೂ ಮತ್ತೆ ಹೊಂಡಗಳನ್ನು ನಿರ್ಮಾಣ ಮಾಡಿ ಮೀನುಗಳನ್ನು ಸಾಕಣೆ ಮಾಡಲಾಗುತ್ತಿತ್ತು.
ನಿಷೇಧವಿದ್ದರೂ ಗ್ರಾಮದ ಮಧ್ಯೆಯೇ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದರು. ಮೀನು ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಅಕ್ಕಪಕ್ಕದಲ್ಲಿ ಮೀನುಗಳಿಗೆ ಹಾಕುತ್ತಿದ್ದ ಕೋಳಿ ಮಾಂಸ ಹಾಗೂ ತ್ಯಾಜ್ಯಗಳನ್ನು ಸುರಿಯುತ್ತಿದ್ದರಿಂದ ಗಬ್ಬು ವಾಸನೆ ಬರುತ್ತಿತ್ತು.
ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳು ಗ್ರಾಮದಿಂದ ಹೊರಕ್ಕೆ ಇರುವುದರಿಂದಾಗಿ ಯಾರಿಗೂ ಕೂಡ ಗಮನಕ್ಕೆ ಬಂದಿರಲಿಲ್ಲ. ಜನ ಹೆಚ್ಚಾಗಿ ಓಡಾಟ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಇದನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.