ಬೆಂಗಳೂರು : ಬಿಬಿಎಂಪಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ.ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಖಾಸಗಿ ಬೌನ್ಸರ್‌ಗಳು, ಸಾರ್ವಜನಿಕರು ಹಾಗೂ ಪಾಲಿಕೆ ಸಿಬ್ಬಂದಿ ಮೇಲೆ ದರ್ಪ ತೋರಿರುವ ಘಟನೆ ನಡೆದಿದೆ.
ಬಿಬಿಎಂಪಿ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ನೇಮಿಸಿದ ಖಾಸಗಿ ಬೌನ್ಸರ್‌ಗಳು, ಕೇಂದ್ರ ಕಚೇರಿಯ ಗೇಟ್ ಬಂದ್ ಮಾಡಿ, ಯಾರಿಗೂ ಒಳಬರದಂತೆ ತಡೆದಿದ್ದೇ ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಿಬಿಎಂಪಿಯಲ್ಲಿ ನಿತ್ಯ ಕೆಲಸ ಮಾಡುವ ಸೆಕ್ಯುರಿಟಿ ಸಿಬ್ಬಂದಿ, ಮಾರ್ಷಲ್‌ಗಳಿದ್ದಾರೆ. ಇದರ ಹೊರತಾಗಿಯೂ, ಆಯುಕ್ತರ ಗಮನಕ್ಕೆ ತಾರದೇ, ಯಾವುದೇ ಅನುಮತಿಯೂ ಇಲ್ಲದೇ ಖಾಸಗಿ ಬೌನ್ಸರ್‌ಗಳನ್ನು ಅಮೃತ್ ರಾಜ್ ನೇಮಿಸಿದ್ದಾರೆ.
ಸಿಬ್ಬಂದಿ ಚೇತನ್ ಎಂದಿನಂತೆ ಕೆಲಸಕ್ಕೆ ಬಂದಿದ್ದು, ಗೇಟ್‌ನೊಳಗೆ ವಾಹನ ಬಿಟ್ಟಿಲ್ಲ. ಬೇರೆ ಕಡೆ ಪಾರ್ಕ್ ಮಾಡಿ ನಡೆದುಕೊಂಡು ಬಂದಾಗಲೂ ಒಳಗೆ ಬಿಡದೆ, ಸೆಕ್ಯುರಿಟಿ ರೂಂನೊಳಗೆ ಕರೆದುಕೊಂಡು ಹೋಗಿ ಕೆನ್ನೆಗೆ ಬಾರಿಸಿದ್ದಾರೆ. ಈ ವಿಚಾರವಾಗಿ ಅಮೃತರಾಜ್‌ರನ್ನು ಪ್ರಶ್ನಿಸಿದಾಗ ತಪ್ಪಾಯ್ತು ಎಂದು ಕ್ಷಮೆ ಯಾಚಿಸಿದ್ದಾರೆ.
ಆಡಳಿತ ವಿಶೇಷ ಆಯುಕ್ತರಾದ ಜೆ.ಮಂಜುನಾಥ್‌ರನ್ನು ಕೇಳಿದ್ರೇ, ಯಾವುದೇ ಪೂರ್ವಾನುಮತಿ ಪಡೆಯದೇ ಖಾಸಗಿ ಬೌನ್ಸರ್‌ಗಳನ್ನ ನೇಮಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಪಾಲಿಕೆಯ ಸಿಬ್ಬಂದಿ, ಅಧಿಕಾರಿಗಳನ್ನೂ ಗೇಟ್‌ನೊಳಗೆ ಬಿಡದೆ, ನೌಕರರೊಬ್ಬರಿಗೆ ಹಲ್ಲೆ ಮಾಡಿ, ಬೌನ್ಸರ್‌ಗಳು ತಮ್ಮ ದರ್ಪ ತೋರಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ