ಬೆಂಗಳೂರು : ಚಿಂತಾಮಣಿ ತಾಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಸಿಡಿದೆದ್ದು ವಿಧಾನಸಭೆಯಲ್ಲಿ ಇಂದು ಧರಣಿ ನಡೆಸಿದ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಕೃಷ್ಣಾರೆಡ್ಡಿ ಅವರು ತಮ್ಮ ಕ್ಷೇತ್ರ ವ್ಯಾಪ್ತಿ ಚಿಂತಾಮಣಿಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ 36 ಕೋಟಿಯ ಕಾಮಗಾರಿಗಳಿಗೆ ಅನುಮತಿ ನೀಡಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಎರಡೂವರೆ ವರ್ಷದಿಂದ ಇದೇ ರೀತಿ ನಡೆಯುತ್ತಿದೆ. ನಾವು ಕ್ಷೇತ್ರದಲ್ಲಿ ಜನರಿಗೆ ಉತ್ತರ ಕೊಟ್ಟು ಸಾಕಾಗಿದೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರಗಳಿಗೆ ಮಂಜೂರಾದ ಕಾಮಗಾರಿಗಳಿಗೆ ಹಣಕಾಸಿನ ನೆರವು ನೀಡಲು ಸಾಧ್ಯವಾಗದಿದ್ದರೆ ಈ ಸರ್ಕಾರ ಏಕೆ ಬೇಕು? ಸಚಿವರು ಏಕೆ ಬೇಕು? ಎಂದು ಸರ್ಕಾರದ ವಿರುದ್ಧ ಗುಡುಗಿದರು. ಇದಕ್ಕೆ ಆಕ್ಷೇಪಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ರಾಜಕೀಯ ಭಾಷಣ ಮಾಡಬೇಡಿ. ನಿಮಗೆ ಉತ್ತರ ಬೇಕಾಗಿದ್ದರೆ ಸಚಿವರು ಏನು ಹೇಳುತ್ತಾರೆ ಎಂಬುದನ್ನು ಕಾಯಬೇಕು. ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ : ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡ : ಹರಿಪ್ರಸಾದ್
ಇದಕ್ಕೆ ಲೋಕೋಪಯೋಗಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಉತ್ತರಿಸಿ, ಅವರು ಸರ್ಕಾರದಿಂದ ಉತ್ತರ ನಿರೀಕ್ಷೆ ಮಾಡುತ್ತಾರೋ ಇಲ್ಲವೇ ರಾಜಕೀಯ ಭಾಷಣ ಮಾಡುತ್ತಿದ್ದಾರೋ ಗೊತ್ತಿಲ್ಲ. ತಕ್ಷಣವೇ ಚಿಂತಾಮಣಿ ಕ್ಷೇತ್ರಕ್ಕೆ 8 ಕೋಟಿಯ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಉಳಿದಿರುವುದನ್ನು ಹಣಕಾಸು ಲಭ್ಯತೆ ಮೇಲೆ ಕೈಗೊಳ್ಳುವ ಭರವಸೆ ನೀಡಿದರು.
ಧರಣಿಗೆ ಮುಂದಾದ JDS ಸದಸ್ಯರು : ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಶಾಸಕ ಕೃಷ್ಣಾರೆಡ್ಡಿ, ಈ ಸರ್ಕಾರದಲ್ಲಿ ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎಂದು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಆಗ ಜೆಡಿಎಸ್ ಉಳಿದ ಸದಸ್ಯರು ಅವರಿಗೆ ಸಾಥ್ ನೀಡಿದರು.
ಸದಸ್ಯರನ್ನು ಸಮಾಧಾನಪಡಿಸಿದ ಕಾರಜೋಳ, ಈ ಕೂಡಲೇ 8 ಕೋಟಿಯ ಕಾಮಗಾರಿಗೆ ಟೆಂಡರ್ ಕರೆಯಲು ಆಡಳಿತಾತ್ಮಕ ಅನುಮೋದನೆ ಕೊಡಲಾಗುವುದು. ರಾಜ್ಯದಲ್ಲಿ ಕೋವಿಡ್ ಇದ್ದ ಕಾರಣ ಆರ್ಥಿಕ ಸಮಸ್ಯೆ ಎದುರಾಗಿರುವುದು ಗೊತ್ತಿದೆ. ನಿಮ್ಮ ಕ್ಷೇತ್ರಕ್ಕೆ ಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ನಿಮ್ಮ ಧರಣಿ ಕೈಬಿಡಿ ಎಂದು ಮನವಿ ಮಾಡಿದರು. ಸಚಿವರ ಮಾತಿಗೆ ಮಣಿದ ಜೆಡಿಎಸ್ ಸದಸ್ಯರು ಧರಣಿಯನ್ನು ವಾಪಸ್ ಪಡೆದರು.